ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನದ ಜತೆಗೆ ಕಾಯ್ದೆಯನ್ನು ಸರಿಯಾಗಿ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸಲು ಜ.18ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.
ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ “ಮನೆ ಮನೆ ಸಂಪರ್ಕ’ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈವರೆಗೆ 4.65 ಲಕ್ಷ ಮನೆಗಳಿಗೆ ಯಶಸ್ವಿಯಾಗಿ ಮಾಹಿತಿ ತಲುಪಿಸಿದೆ. ಜ. 11 ಮತ್ತು 12ರಂದು ಎರಡೂ ದಿನ ಪೂರ್ಣ ಪ್ರಮಾಣದಲ್ಲಿ ಬೂತ್‌ಮಟ್ಟದಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ನಡೆಸಿ ಎಲ್ಲರಿಗೂ ಮಾಹಿತಿ ತಲುಪಿಸಲು ಬಿಜೆಪಿ ಕರೆ ನೀಡಿದೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಅಭಿಯಾನದಡಿ ಎರಡನೇ ಹಂತದ ಕಾರ್ಯಯೋಜನೆ ರೂಪಿಸಲಾಗಿದೆ. ಕಾಯ್ದೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದಿಸಿ ಪ್ರತಿ ಬೂತ್‌ನಿಂದಲೂ ಪತ್ರ ಬರೆಯಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಯ್ದೆ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕ ಅಭಿನಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ ಎನ್.ರವಿಕುಮಾರ್ ಮಾತನಾಡಿ, ಸಿಎಎ ಕುರಿತು ಕಾಂಗ್ರೆಸ್, ಕಮ್ಯೂನಿಸ್ಟರು, ಕೆಲವು ಬುದ್ಧಿಜೀವಿಗಳು ಅಪಪ್ರಚಾರ ನಡೆಸಿ ಅಲ್ಪಸಂಖ್ಯಾಕರನ್ನು ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದರು. ಆದರೆ ಇವರೆಲ್ಲರ ಕುತಂತ್ರವನ್ನು ಬಿಜೆಪಿ ಬಯಲಿಗೆಳೆಯಿತು. ಸಿಎಎ ದೇಶದ 130 ಕೋಟಿ ಜನರ ಸಮ್ಮತ ಕಾಯ್ದೆ ಎಂದು ಮನವೊಲಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ ಎಂದು ಹೇಳಿದರು.
ಕಾಯ್ದೆ ಬಗ್ಗೆ ಅರಿವು ಹೆಚ್ಚಾದಂತೆ ಪ್ರತಿಭಟನೆ ನಡೆಸುತ್ತಿದ್ದವರು ಶಾಂತರಾಗುತ್ತಿದ್ದಾರೆ. ಕಾಯ್ದೆಯಲ್ಲಿ ಮುಸ್ಲಿಮರಿಗೆ ತೊಂದರೆಯಾಗುವ ಒಂದು ಅಂಶ ತಿಳಿಸಿ ಎನ್ನುತ್ತಿದ್ದಂತೆ ವಿರೋಧಿಸುತ್ತಿದ್ದವರ ಬಂಡವಾಳ ಬಯಲಾಗಿದೆ. ಒಂದೆರಡು ಕಡೆ ಅಭಿಯಾನಕ್ಕೆ “ಗೋ ಬ್ಯಾಕ್’ ಪ್ರತಿರೋಧ ವ್ಯಕ್ತವಾಗಿದ್ದು ಹೊರತುಪಡಿಸಿದರೆ ಶೇ.99ರಷ್ಟು ಮಂದಿಗೆ ಕಾಯ್ದೆ ಬಗ್ಗೆ ಮನವರಿಕೆಯಾಗಿದೆ ಎಂದು ತಿಳಿಸಿದರು.