Advertisement

ಅಮಿತ್‌ ಶಾ ಪುತ್ರನ ವಿರುದ್ಧ ಆರೋಪ

06:45 AM Oct 09, 2017 | Team Udayavani |

ಹೊಸದಿಲ್ಲಿ: ಅಮಿತ್‌ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಒಂದೇ ವರ್ಷದಲ್ಲಿ ಅವರ ಪುತ್ರ ಜಯ್‌ ಶಾ ಅವರ ಕಂಪನಿಯ ವಹಿವಾಟು 16 ಸಾವಿರ ಪಟ್ಟು ಹೆಚ್ಚಳವಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. 

Advertisement

ದಾಖಲೆಗಳನ್ನು ಉಲ್ಲೇಖೀಸಿ ವೆಬ್‌ಸೈಟ್‌ವೊಂದು ಮಾಡಿರುವ ಈ ವರದಿಯು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷವು ಈ ಬಗ್ಗೆ ತನಿಖೆಗೆ ಒತ್ತಾಯಿಸಿವೆ. ಇನ್ನೊಂದೆಡೆ, ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ವೆಬ್‌ಸೈಟ್‌ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಹೇಳಿದೆ.

ಸಿಬಿಐಗೆ ವಹಿಸ್ತೀರಾ?: ವೆಬ್‌ಸೈಟ್‌ನಲ್ಲಿ ಬಂದ ಸುದ್ದಿಯನ್ನು ಆಧರಿಸಿ, ನವದೆಹಲಿ ಯಲ್ಲಿ ರವಿವಾರ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. “ನಷ್ಟದಲ್ಲಿದ್ದ ಜಯ್‌ ಶಾ ಅವರ ಕಂಪನಿ ಒಂದೇ ವರ್ಷದಲ್ಲಿ 80 ಕೋಟಿ ರೂ. ವಹಿವಾಟು ನಡೆಸಿದ್ದು ಹೇಗೆ? ವಹಿವಾಟು ಪ್ರಮಾಣ 16 ಸಾವಿರ ಪಟ್ಟು ಹೆಚ್ಚಾಗಿದ್ದು ಹೇಗೆ? ಅಧಿಕಾರ ಬದಲಾದಂತೆ ಕೆಲವರ ಅದೃಷ್ಟವೂ ಬದಲಾಗುತ್ತದೆ ಎನ್ನುವುದು ಇದಕ್ಕೇನಾ? ಪ್ರಧಾನಿ ಮೋದಿ ಅವರಿಗೆ ನಮ್ಮದೊಂದು ಪ್ರಶ್ನೆ. ಈಗ ನೀವು ಅಮಿತ್‌ ಶಾ ಪುತ್ರನ ಮೇಲಿನ ಆರೋಪ ಕುರಿತು ಸಿಬಿಐ ತನಿಖೆಗೆ ಆದೇಶಿಸುತ್ತೀರಾ? ಆರೋಪಿಗಳನ್ನು ಬಂಧಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸುತ್ತೀರಾ’ ಎಂದು ಸಿಬಲ್‌ ಪ್ರಶ್ನಿಸಿದ್ದಾರೆ. ಇದೇ ವೇಳೆ, ಈ ಕುರಿತು ತನಿಖೆಯಾಗಬೇಕು ಎಂದು ಆಪ್‌, ಸಿಪಿಐ ಹಾಗೂ ಸಿಪಿಎಂ ಕೂಡ ಒತ್ತಾಯಿಸಿವೆ.
ಸುಳ್ಳು ಎಂದ ಗೋಯಲ್‌: ಕಾಂಗ್ರೆಸ್‌ ಸುದ್ದಿ ಗೋಷ್ಠಿಯ ಬಳಿಕ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರೂ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ಶಾ ಪುತ್ರನ ಮೇಲಿ ರುವ ಆರೋಪವು ಸುಳ್ಳು, ಅವಹೇಳನಕಾರಿ ಹಾಗೂ ಮಾನಹಾನಿಕರ ಎಂದು ಹೇಳಿದ್ದಾರೆ.

100 ಕೋಟಿ ರೂ. ಮಾನಹಾನಿ ಕೇಸ್‌
ಶಾ ಪುತ್ರ ಜಯ್‌ ಅವರೂ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, “ನನ್ನೆಲ್ಲ ವಹಿವಾಟುಗಳೂ ಕಾನೂನುಬದ್ಧವಾಗಿದೆ. ಅವೆಲ್ಲವೂ ನನ್ನ ತೆರಿಗೆ ದಾಖಲೆಗಳಲ್ಲಿವೆ. ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ನ್ಯೂಸ್‌ ವೆಬ್‌ಸೈಟ್‌, ಅದರ ಮಾಲಕ, ಸಂಪಾದಕ ಹಾಗೂ ಲೇಖಕರ ವಿರುದ್ಧ 100 ಕೋಟಿ ರೂ.ಗಳ ಮಾನಹಾನಿ ಪ್ರಕರಣ ದಾಖಲಿಸುತ್ತೇನೆ’ ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next