Advertisement

ಅಮಿತ್‌ ಶಾ ಇಂದು ವೈಮಾನಿಕ ಸಮೀಕ್ಷೆ

11:21 PM Aug 10, 2019 | Team Udayavani |

ಬೆಂಗಳೂರು: ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿ ಜನ- ಜಾನುವಾರು ಸಾವು ನೋವು ಸಂಭವಿಸುವ ಜತೆಗೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

Advertisement

ಮಧ್ಯಾಹ್ನ 2.30ಕ್ಕೆ ಅಮಿತ್‌ ಶಾ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ನಂತರ 2.45ಕ್ಕೆ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಸುಮಾರು 1.45 ಗಂಟೆ ಕಾಲ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಸಾಂಬ್ರಾ ವಿಮಾನನಿಲ್ದಾಣದ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ವೈಮಾನಿಕ ಸಮೀಕ್ಷೆ ಹಾಗೂ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಅನುದಾನ ನಿರೀಕ್ಷೆ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಜತೆಗೆ ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣದ ಅಗತ್ಯವಿದೆ. ಹಾಗಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯವಿದೆ. ಇನ್ನೊಂದೆಡೆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂಬ ಆಗ್ರಹವೂ ಇದೆ.

ಒಟ್ಟಾರೆ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿ, ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಮೊತ್ತವನ್ನು ಕೇಂದ್ರ ಗೃಹ ಸಚಿವರು ಘೋಷಿಸುವರೇ ಎಂಬ ಕುತೂಹಲ ಮೂಡಿದೆ. ಅಮಿತ್‌ ಶಾ ಅವರು ಕೇಂದ್ರ ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ವೇಳೆಯಲ್ಲೇ ಸಂಪುಟ ವಿಸ್ತರಣೆ ಬಗ್ಗೆ ಯಡಿಯೂರಪ್ಪ ಅವರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next