ತಿರುವನಂತಪುರ: ಕೇರಳದಲ್ಲಿ ಎನ್‌ಡಿಎ ನೆಲೆಯನ್ನು ವಿಸ್ತರಿಸುವ ರಣತಂತ್ರ ರೂಪಿಸುವ ಸಲುವಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದಿನ ತಿಂಗಳು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಎನ್‌ಡಿಎ ಸಿದ್ಧಾಂತವನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಯಾರಿದೆ. ಮುಂಬರುವ ಚುನಾವಣೆಗಾಗುವಾಗ ರಾಜ್ಯದಲ್ಲಿ ಎನ್‌ಡಿಎ ಬಲಿಷ್ಠ ತೃತೀಯ ಪರ್ಯಾಯವಾಗಿ ಹೊರಹೊಮ್ಮಬೇಕೆನ್ನುವುದು ನಮ್ಮ ಅಪೇಕ್ಷೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಅತಿಕ್ರಮಣ ತೆರವು ಕಾರ್ಯಾಚರಣೆಯಿಂದಾಗಿ ಭಾರೀ ವಿವಾದದ ಗೂಡಾಗಿರುವ ಇಡುಕ್ಕಿ ಜಿಲ್ಲೆಯ ಮುನ್ನಾರ್‌ಗೆ ಮೇ 14ರಂದು ಬಿಜೆಪಿ ಸಂಸದರ ನಿಯೋಗ ಭೇಟಿ ನೀಡಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಅತಿಕ್ರಮಣದ ಕುರಿತಾದ ವಾಸ್ತವ ವರದಿಯನ್ನು ಬಿಜೆಪಿ ನಿಯೋಗ ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ. ಮುನ್ನಾರ್ ಅತಿಕ್ರಮಣ ವಿವಾದದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡಬೇಕೆಂದು ಆಗ್ರಹಿಸುವ ಉದ್ದೇಶದಿಂದ ಬಿಜೆಪಿ ಸಂಸದರ ನಿಯೋಗ ಸತ್ಯ ಶೋಧನಾ ವರದಿ ತಯಾರಿಸಲಿದೆ ಎಂದಿದ್ದಾರೆ. ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ, ಎನ್‌ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಸಚಿವ ಹಾಗೂ ಶಾಸಕ ಓ. ರಾಜಗೋಪಾಲ್ ಬಿಜೆಪಿ ನಿಯೋಗದಲ್ಲಿರುತ್ತಾರೆ.
ಎಲ್‌ಡಿಎಫ್ ಮತ್ತು ಯುಡಿಎಫ್ ಸರಕಾರಗಳು ತಮ್ಮ ಆಳ್ವಿಕೆ ಕಾಲದಲ್ಲಿ ಮುನ್ನಾರ್‌ನಲ್ಲಿ ಅತಿಕ್ರಮಣಕ್ಕೆ ಕುಮ್ಮಕ್ಕು ನೀಡಿರುವುದರಿಂದಲೇ ಪರಿಸ್ಥಿತಿ ಈಗ ಹದಗೆಟ್ಟಿದೆ ಎಂದು ಕುಮ್ಮನಂ ಆರೋಪಿಸಿದ್ದಾರೆ.
ಮಾಜಿ ಹಣಕಾಸು ಸಚಿವ ಕೆ. ಎಂ. ಮಾಣಿ ನೇತೃತ್ವದ ಕೇರಳ ಕಾಂಗ್ರೆಸ್ (ಎಂ) ಎನ್‌ಡಿಎ ಕೂಟದಲ್ಲಿ ಸೇರಿಕೊಳ್ಳಲಿದೆಯೇ ಎಂದು ಕೇಳಿದಾಗ ಮೊದಲು ಕೆಸಿ(ಎಂ) ತನ್ನ ನಿಲುವು ಬಹಿರಂಗಪಡಿಸಲಿ ಎಂದರು.