ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬರುವ ಮೊದಲು ಹೋಮ್ ವರ್ಕ್ ಮಾಡಿಕೊಂಡು ಬರಲಿ ಎಂದು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಬೆಂಗಳೂರಿನಲ್ಲಿ ಯಾವುದೇ ಕೆಲಸ ಆಗಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ. ನಗರದ ಸಬರ್‌ಬನ್ ಯೋಜನೆಗೆ 17 ಸಾವಿರ ಕೋಟಿ ರೂ. ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಮೀಸಲಿಟ್ಟಿರುವುದು ಕೇವಲ ಒಂದು ಕೋಟಿ ರೂ. ಮಾತ್ರ ಎಂದು ತಿಳಿಸಿದರು.
ಬೆಂಗಳೂರು ಇಡೀ ದೇಶದ ಹೆಮ್ಮೆಯ ನಗರವಾಗಿದೆ. ಈ ನಗರದ ಬಗ್ಗೆ ಮಾತನಾಡುವಾಗ ಸರಿಯಾಗಿ ಅಧ್ಯಯನ ಮಾಡಿಕೊಂಡು ಮಾತನಾಡಿ ಎಂದು ಎಚ್ಚರಿಕೆ ನೀಡಿದ ಅವರು, ಐದು ವರ್ಷದಲ್ಲಿ ರಾಜ್ಯ ಸರ್ಕಾರ ಬೆಂಗಳೂರಿಗೆ ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಮೆಟ್ರೋ ಯೋಜನೆಯನ್ನು ಯುಪಿಎ ಅವಧಿಯಲ್ಲಿ ಆರಂಭಿಸಲಾಗಿತ್ತು. ಮೊದಲ ಹಂತದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೇ ಪೂರ್ಣಗೊಳಿಸಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಸುನಾಮಿಯಂತೆ ಬರುತ್ತಾರೆ ಎಂದು ಹೇಳುತ್ತಾರೆ. ಸುನಾಮಿ ಯಾರಿಗೂ ಒಳ್ಳೆಯದನ್ನು ಮಾಡಲು ಬರುವುದಿಲ್ಲ. ಅದು ಜನರ ಜೀವ ತೆಗೆಯಲು ಬರುತ್ತದೆ. ಕರ್ನಾಟಕದ ಜನತೆ ಅಷ್ಟೊಂದು ದಡ್ಡರಿಲ್ಲ ಎಂದರು.
ಸಿದ್ದರಾಮಯ್ಯ ದುಬಾರಿ ವಾಚ್ ಗಿಫ್ಟ್ ಪಡೆದಿದ್ದಾರೆ ಎಂದು ಅಮಿತ್ ಶಾ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಯಾವುದೇ ಮುಖ್ಯಮಂತ್ರಿಗೆ ಗಿಫ್ಟ್ ಬಂದರೆ ಅದನ್ನು ಅವರ ಅಧಿಕಾರ ಮುಗಿಯುವ ಸಂದರ್ಭದಲ್ಲಿ ಕ್ಯಾಬಿನೆಟ್ ಹಾಲ್‌ನಲ್ಲಿ ಇಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಗೆ ದುಬಾರಿ ಸೂಟ್ ಗಿಫ್ಟ್ ಕೊಟ್ಟಿದ್ದಾರೆ. ಅದನ್ನು ಮಾರಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಅಮಿತ್ ಶಾ ಅವರು ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದನ್ನು ಬಸವಣ್ಣನೇ ತಿರಸ್ಕರಿಸಿದ್ದಾನೆ. ಹೀಗಾಗಿ ಸುಳ್ಳು ಹೇಳುವ ಬಿಜೆಪಿಯವರನ್ನು ರಾಜ್ಯದ ಜನತೆ ನಂಬುವುದಿಲ್ಲ ಎಂದರು. ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧೆ ಮಾಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ನಾನು ಸಹ ನನ್ನ ಕ್ಷೇತ್ರ ಬಿಟ್ಟು ಕೊಡುವುದಾಗಿ ಹೇಳಿದ್ದೆ. ಬಾದಾಮಿಯಲ್ಲಿ ಸ್ಪರ್ಧಿಸುವುದು ಅವರ ಇಚ್ಚೆಗೆ ಬಿಟ್ಟಿದ್ದು ಎಂದು ಹೇಳಿದರು.