ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾತ್ರಿ ಪ್ರತಿಭಟನಾ ನಿರತ ರೈತರೊಂದಿಗೆ ನಡೆಸಿದ ಸಭೆ ವಿಫಲವಾಗಿದೆ. ಸಭೆಯಲ್ಲಿ 13ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದು, ಎರಡೂ ಕಡೆಯವರು ಪಟ್ಟು ಸಡಲಿಸಿದೆ, ತಮ್ಮ ನಿಲುವುಗಳಲ್ಲಿ ದೃಢವಾಗಿ ಉಳಿದಿದ್ದರಿಂದ ‘ಅನೌಪಚಾರಿಕ ಮಾತುಕತೆ” ವ್ಯರ್ಥವಾದಂತಾಗಿದೆ.
ಕಾಯ್ದೆಗಳಿಗೆ ಮಾಡಬಹುದಾದದ ತಿದ್ದುಪಡಿಗಳ ಬಗ್ಗೆ ಲಿಖಿತ ಭರವಸೆ ಕೊಡಲಾಗುವುದು ಎಂದು ಅಮಿತ್ ಶಾ ಮನವಿ ಮಾಡಿದರೂ, ರೈತ ಮುಖಂಡರು ಕಾಯ್ದೆಗಳನ್ನು ರದ್ದು ಮಾಡಲೇಬೇಕೆಂದು ಪಟ್ಟುಹಿಡಿದರು.
ಸರ್ಕಾರದ ಜೊತೆ ಮುಂದಿನ ಹಂತದ ಮಾತುಕತೆಯ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ರೈತ ಮುಖಂಡ ಹನ್ನನ್ ಮೊಲ್ಲಾ ಸಭೆಯ ಬಳಿಕ ತಿಳಿಸಿದ್ದಾರೆ. ಇಂದು (ಡಿ.9) ಕೆಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದ ಸಚಿವರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದ್ದರೂ, ರೈತ ಮುಖಂಡರು ತಾವು ಭಾಗವಹಿಸುವುದಿಲ್ಲ ಮತ್ತು ಸರ್ಕಾರದ ಪ್ರಸ್ತಾಪವನ್ನು ಚರ್ಚಿಸಲು ಮೊದಲು ಸಭೆ ಸೇರುತ್ತೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಸಿಂಘು ಗಡಿಯಲ್ಲಿ ಸಾವಿರಾರು ರೈತರು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದು ಮಾಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಏತನ್ಮಧ್ಯೆ ಮಂಗಳವಾರ 200 ಟ್ರಕ್ ಗಳಲ್ಲಿ ಬಂದ ಹಲವು ರೈತರು ಪ್ರತಿಭಟನಾಕಾರರೊಂದಿಗೆ ಕೂಡಿಕೊಂಡಿದ್ದಾರೆ.
ಶಾಂತಿಯುತ ಬಂದ್
ರೈತರು ಕರೆ ನೀಡಿದ್ದ ಭಾರತ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ದೇಶದ ಬಹುತೇಕ ರಾಜ್ಯಗಳಿಗೆ ಬಂದ್ ಬಿಸಿ ತಟ್ಟಿತು. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಹಲವು ರಾಜ್ಯಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ಕೆಲವೆಡೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ರ್ಯಾಲಿ, ರಸ್ತೆ ತಡೆ-ರೈಲು ತಡೆಗಳನ್ನು ನಡೆಸಿದರು.