Advertisement

ಹಿಂದೂ ವಿರೋಧಿ ರಾಜ್ಯ ಸರಕಾರಕ್ಕೆ ಬಿಜೆಪಿ ಉತ್ತರ: ಅಮಿತ್‌ ಶಾ

09:53 AM May 09, 2018 | Team Udayavani |

ಮಹಾನಗರ: ರಾಜ್ಯ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿಗಳನ್ನು, ಬಿಜೆಪಿ ಅಧಿಕಾರಕ್ಕೆ ಬಂದ ತತ್‌ಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಹಿಂದೂ ವಿರೋಧಿ ರಾಜ್ಯ ಸರಕಾರಕ್ಕೆ ಮೇ 12ರಂದು ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

Advertisement

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್‌ ಅವರ ಪರವಾಗಿ ಮಂಗಳೂರಿನ ನವಭಾರತ್‌ ಸರ್ಕಲ್‌ನಿಂದ ಕಾರ್‌ ಸ್ಟ್ರೀಟ್‌ವರೆಗೆ ನಡೆದ ರೋಡ್‌ ಶೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಕಾಂಗ್ರೆಸ್‌ ಸರಕಾರ ವಿಫಲವಾಗಿದೆ. ಆರೋಪಿಗಳನ್ನು ರಕ್ಷಿಸಲು ಸರಕಾರ ಮುಂದಾಗಿತ್ತು. ಆದರೆ, ಮುಂದೆ ಬಿಜೆಪಿ ಆಡಳಿತಕ್ಕೆ ಬಂದ ತತ್‌ಕ್ಷಣವೇ ಆರೋಪಿಗಳು ಪಾತಾಳದಲ್ಲಿ ಅಡಗಿದ್ದರೂ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ನಂಬರ್‌ 1 ರಾಜ್ಯವಾಗಲಿದೆ
ಅಭಿವೃದ್ಧಿ ಹಾಗೂ ರೈತ ವಿರೋಧಿ ಸಿದ್ದರಾಮಯ್ಯ ಸರಕಾರವನ್ನು ಕಿತ್ತೆಸೆದು ದೇಶದಲ್ಲಿ ಅಭಿವೃದ್ಧಿಪರ ನಂಬರ್‌ 1 ರಾಜ್ಯವಾಗಿ ಕರ್ನಾಟಕವನ್ನು ಬಿಜೆಪಿ ಮಾಡಲಿದೆ ಎಂದರು. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕರಾವಳಿಯಲ್ಲಿ ಕಾಂಗ್ರೆಸ್‌ ಆಡಳಿತ ವ್ಯವಸ್ಥೆಗೆ ಕೆಲವೇ ದಿನದಲ್ಲಿ ಅಂತಿಮ ಪರದೆ ಬೀಳಲಿದ್ದು, ಜಿಲ್ಲೆಯ 8 ವಿಧಾನಸಭೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಶಾ ಗೆ ಅದ್ಧೂರಿ ಸ್ವಾಗತ
ಅಮಿತ್‌ ಶಾ ಸಾಗಿ ಬರುತ್ತಿದ್ದ ವಾಹನಕ್ಕೆ ಬದಿಯಲ್ಲಿ ನಿಂತಿದ್ದ ನೂರಾರು ಜನರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಕಾರ್ಯಕರ್ತರಿಗೆ ಮಜ್ಜಿಗೆ ಹಾಗೂ ಬರುವ ಹಾದಿಯಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿ ವೇದವ್ಯಾಸ್‌ ಕಾಮತ್‌ ಅವರು ಅಮಿತ್‌ ಶಾ ಅವರನ್ನು ಸ್ವಾಗತಿಸಿದರು. ಉತ್ತರಪ್ರದೇಶ ಸಚಿವರಾದ ಮಹೇಂದ್ರ ಸಿಂಗ್‌, ವಿಧಾನಪರಿಷತ್‌ ವಿಪಕ್ಷ ಮುಖ್ಯಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು. 

ಅಮಿತ್‌ ಶಾ ಭರ್ಜರಿ ರೋಡ್‌ ಶೋ
ನವಭಾರತ್‌ ಸರ್ಕಲ್‌ನಿಂದ ತೆರೆದ ವಾಹನದಲ್ಲಿ ಸಾಗಿದ ಅಮಿತ್‌ ಶಾ ಭರ್ಜರಿ ರೋಡ್‌ ಶೋ ನಡೆಸಿದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ರೋಡ್‌ ಶೋದಲ್ಲಿ ಭಾಗವಹಿಸಿದರು. ‘ಸರಕಾರ ಬದಲಿಸಿ-ಬಿಜೆಪಿ ಗೆಲ್ಲಿಸಿ’ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಮೆರವಣಿಗೆಯ ಉದ್ದಕ್ಕೂ “ಮೋದಿ ಮೋದಿ ಮೋದಿ’ ಉದ್ಘಾರವೇ ಜೋರಾಗಿತ್ತು. ಬೃಹತ್‌ ಗಾತ್ರದ ಬಿಜೆಪಿ ಧ್ವಜವನ್ನು ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು ನಗರದ ಮುಖ್ಯಬೀದಿಯಾದ ಕಾರ್‌ಸ್ಟ್ರೀಟ್‌ ವ್ಯಾಪ್ತಿಯಲ್ಲಿ ಸಾಗಿಬಂದರು. ನವಭಾರತ್‌ ಸರ್ಕಲ್‌ನಿಂದಾಗಿ, ನ್ಯೂಚಿತ್ರ ಕಳೆದು, ಕಾರ್‌ಸ್ಟ್ರೀಟ್‌ನಲ್ಲಿರುವ ದೇವಳದ ಮುಂಭಾಗದಲ್ಲಿ ರೋಡ್‌ ಶೋ ಕೊನೆಗೊಳಿಸಲಾಯಿತು. ಅಲ್ಲಿ ಅಮಿತ್‌ ಶಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next