Advertisement

ಸುಧಾರಿಸಿದೆ ಉ.ಪ್ರ.ಆಡಳಿತ: ಉತ್ತಮ ಆಡಳಿತ ಸೂಚ್ಯಂಕ 2021 ವರದಿಯಲ್ಲಿ ಉಲ್ಲೇಖ

11:44 PM Dec 25, 2021 | Team Udayavani |

ಹೊಸದಿಲ್ಲಿ: ಶೀಘ್ರದಲ್ಲಿಯೇ ವಿಧಾನಸಭೆ ಚುನಾ ವಣೆ ನಡೆಯಲಿರುವ ಉತ್ತರ ಪ್ರದೇಶ “ಉತ್ತಮ ಆಡಳಿತ ಸೂಚ್ಯಂಕ 2021’ಉತ್ತಮ ಸಾಧನೆ ಮಾಡಿದೆ. ಈ ಸೂಚ್ಯಂಕದಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ವಿಕಾಸ ಅಘಾಡಿ ಅಧಿಕಾರದಲ್ಲಿರುವ ಮಹಾರಾಷ್ಟ್ರ ದ್ವಿತೀಯ ಮತ್ತು ಗೋವಾ ತೃತೀಯ ಸ್ಥಾನದಲ್ಲಿದೆ.  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೊಸದಿಲ್ಲಿಯಲ್ಲಿ ಶನಿವಾರ ಸೂಚ್ಯಂಕ ಬಿಡುಗಡೆಗೊಳಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು  “ಉತ್ತಮ ಆಡಳಿತ ದಿನ’ ಎಂದು ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಈ ಸೂಚ್ಯಂಕ ಬಿಡುಗಡೆ ಮಾಡಲಾಗಿದೆ.

Advertisement

ದೇಶದ ಒಟ್ಟು 20 ರಾಜ್ಯಗಳು ಮತ್ತು ಕೇಂದ್ರಾ ಡಳಿತ ಪ್ರದೇಶಗಳು ಈ ಸೂಚ್ಯಂಕದಲ್ಲಿ ಭಾಗವಹಿ ಸಿದ್ದವು. ಒಟ್ಟು 58 ಸೂಚ್ಯಂಕಗಳಲ್ಲಿ ಒಟ್ಟಾರೆ ಅಂಕಗಳ ಆಧಾರದಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದೆ. ಗಮನಾರ್ಹ ಅಂಶವೆಂದರೆ ಶೀಘ್ರದಲ್ಲಿಯೇ ಚುನಾ ವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಶೇ.8.9ರಷ್ಟು ಅಂಕಗಳ ಸುಧಾರಣೆ ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಶೇ.3.7ರಷ್ಟು ಅಂಕಗಳಲ್ಲಿ ಸುಧಾರಣೆ ಕಂಡು ಬಂದಿದೆ.

ದಿಲ್ಲಿಗೆ ಮೊದಲ ಸ್ಥಾನ: ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿ ಶೇ.14ರಷ್ಟು ಅಂಕ ಹೆಚ್ಚಿಸಿಕೊಂಡು ಮೊದಲ ಸ್ಥಾನದಲ್ಲಿದೆ. ಅದು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದೆ. ಈಶಾನ್ಯ ರಾಜ್ಯಗಳು ಮತ್ತು ಗುಡ್ಡಗಾಡು ರಾಜ್ಯಗಳ ವಿಭಾಗದಲ್ಲಿ ಮಿಜೋರಾಂ,   ಜಮ್ಮು ಮತ್ತು ಕಾಶ್ಮೀರ ಕ್ರಮ ವಾಗಿ ಶೇ.10.4. ಶೇ.3.7ರಷ್ಟು ಸಾಧನೆ ಮಾಡಿವೆ.

ಒಳ್ಳೆಯ ನಿರ್ಧಾರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರಿಗೆ ಒಳ್ಳೆಯದಾಗುವ ನಿರ್ಧಾರ ಗಳನ್ನೇ ಕೈಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.  ಸೂಚ್ಯಂಕ ಬಿಡುಗಡೆ ಮಾಡಿ ಮಾತನಾಡಿದ ಅವರು ಹಿಂದಿನ ಸರಕಾರಗಳ ಅವಧಿಯಲ್ಲಿ ಕೆಲವೊಂದು ಬಾರಿ  ವೋಟ್‌ ಬ್ಯಾಂಕ್‌ ಅನ್ನು ಗಮನದಲ್ಲಿರಿಸಿಕೊಂಡು ಯೋಜನೆ-ನಿರ್ಧಾ   ರಗಳನ್ನು ಕೈಗೊಳ್ಳಲಾಗುತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಹಿತ ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳ  ಲಾಗು ತ್ತಿದೆ. ಇದೊಂದು ವ್ಯತ್ಯಾಸ ಗಮನಿಸಬೇಕಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಈಗಿನ ಕೇಂದ್ರ ಸರಕಾರ ದೇಶವಾಸಿಗಳಿಗೆ ಮನೆ, ಶೌಚಾಲಯ, ಅಡುಗೆ ಅನಿಲ ಸಂಪರ್ಕ, ಕುಡಿಯುವ ನೀರು, ವೈದ್ಯಕೀಯ ವಿಮೆ ಸೇರಿದಂತೆ ಹಲವು ಸೌಲಭ್ಯ ಗಳನ್ನು ನೀಡಿದೆ. ಕೊರೊನಾ ಅವಧಿಯಲ್ಲಿ 80 ಕೋಟಿ ಮಂದಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

ಕರ್ನಾಟಕಕ್ಕೆ ಹೇಗೆ? :

ಕೈಗಾರಿಕೆ ಮತ್ತು ವಾಣಿಜ್ಯ ವಿಚಾರದಲ್ಲಿ ಕರ್ನಾಟಕಕ್ಕೆ 3 ನೇ ಸ್ಥಾನ,  ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ 5, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ 7ನೇ ಸ್ಥಾನ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ 7ನೇ ಸ್ಥಾನ, ಸಾರ್ವಜನಿಕ ಮೂಲ ಸೌಕರ್ಯ ಕ್ಷೇತ್ರದಲ್ಲಿ 8ನೇ ಸ್ಥಾನ, ಆರ್ಥಿಕ ವ್ಯವಹಾರಗಳ ನಿರ್ವಹಣೆ ಯಲ್ಲಿ 3ನೇ ಸ್ಥಾನ ಇದೆ.

ಯಾವ ಕ್ಷೇತ್ರಗಳು? :

ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ವಾಣಿಜ್ಯ ಮತ್ತು ಕೈಗಾರಿಕೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ, ಮೂಲ ಸೌಕರ್ಯ, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಭದ್ರತೆ, ಪರಿಸರ, ಜನರನ್ನು ಕೇಂದ್ರೀಕರಿಸಿದ ಆಡಳಿತ ವ್ಯವಸ್ಥೆ.

3 ಕೋಟಿ ಅರ್ಜಿ, 6 ಕೋಟಿ ದೂರು ವಿಲೇವಾರಿ :

ಕೇಂದ್ರ ಸರಕಾರ ಡಿ.20ರಂದು ಶುರು ಮಾಡಿದ ಉತ್ತಮ ಆಡಳಿತದ ದಿನ ಪ್ರಯಕ್ತ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶನಿವಾರದ ವರೆಗೆ 3 ಕೋಟಿ ಅರ್ಜಿಗಳು, 6 ಕೋಟಿ ದೂರುಗಳನ್ನು ವಿಲೇವಾರಿ ಮಾಡಿವೆ. ಗ್ರಾಮ ಮಟ್ಟದ ವರೆಗೆ ಆಡಳಿತ ವ್ಯವಸ್ಥೆ ತಲುಪುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಥ ಅಭಿಯಾನ ಕೈಗೊಳ್ಳಲು ಸೂಚನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next