Advertisement
ಇತರೆ ರಾಜ್ಯಗಳಲ್ಲಿ ಲೋಕಸಭಾ ಚುನಾವಣಾ ಸಿದ್ಧತೆ ಚುರುಕಾಗಿದ್ದರೆ, ಕರ್ನಾಟಕದಲ್ಲಿ ಪಕ್ಷಕ್ಕೆ ಉತ್ತಮ ನೆಲೆಯಿದ್ದರೂ ಸಂಘಟನೆ ಹಾಗೂ ಸಿದ್ಧತಾ ಕಾರ್ಯ ಚುರುಕುಗೊಳ್ಳದಿರುವ ಬಗ್ಗೆ ಶಾ ಅಸಮಾಧಾಬನ ವ್ಯಕ್ತಪಡಿಸಿದ್ದಾರಲ್ಲದೆ, ಈ ಸಂಬಂಧ ತಾವೇ ಸಭೆಗಳನ್ನು ನಡೆಸಲು ಮುಂದಾಗಿದ್ದಾರಲ್ಲದೆ, ಕೋರ್ ಕಮಿಟಿ ಸಭೆಯಲ್ಲೂ ಭಾಗವಹಿಸುತ್ತಿದ್ದಾರೆ. ಫೆ. 21ರಂದು ಚಿಕ್ಕಬಳ್ಳಾಪುರ, ಕೋಲಾರ ಇತರೆ ಕ್ಷೇತ್ರಗಳ “ಶಕ್ತಿಕೇಂದ್ರ ಪ್ರಮುಖ’ರ ಸಭೆ ನಡೆಸಲು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿಗಳು, ಪ್ರಭಾರಿಗಳ ಸಭೆ, ಇತರೆ ಪ್ರಮುಖರ ಸಭೆಯನ್ನೂ ನಡೆಸಲಿರುವ ಅಮಿತ್ ಶಾ ಅವರು ಲೋಕಸಭಾ ಚುನಾವಣಾ ತಯಾರಿ ಬಗ್ಗೆಯೂ ಲೋಕಸಭಾ ಚುನಾವಣೆಗೆ ಸ್ಪಷ್ಟ ನಿರ್ದೇಶನ ನೀಡುವ ನಿರೀಕ್ಷೆ ಇದೆ.
Related Articles
Advertisement
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ “ಆಪರೇಷನ್ ಕಮಲ’ದ ಆಡಿಯೋ ಪ್ರಕರಣದಿಂದ ಪಕ್ಷದ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಈ ವಿಚಾರ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು. ಈ ಬೆಳವಣಿಗೆಗಳಿಂದ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಮಹತ್ವದ ಕೋರ್ ಕಮಿಟಿ ಸಭೆಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯೂ ನಿಗದಿಯಾಗಿದ್ದು, ಅದರಲ್ಲಿ ಅಮಿತ್ ಶಾ ಅವರು ಪಾಲ್ಗೊಳ್ಳುತ್ತಿರುವುದು ಮಹತ್ವ ಪಡೆದುಕೊಂಡಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ನಾಯಕರೊಂದಿಗೆ ನೇರವಾಗಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಖಾಮುಖೀ ಮಾತುಕತೆಯ ಬಳಿಕ ಕೆಲ ನಿರ್ದಿಷ್ಟ ಸೂಚನೆಗಳನ್ನು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಾಕೀತು ಮಾಡುವ ಸಾಧ್ಯತೆ ಇದೆಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ನಿರಂತರವಾಗಿ ತಮ್ಮದೇ ಮೂಲಗಳಿಂದ ಮಾಹಿತಿ ಪಡೆಯುತ್ತಿರುವ ವರಿಷ್ಠರು ಈವರೆಗೆ ರಾಜ್ಯ ನಾಯಕರಿಗೆ ಸ್ಪಷ್ಟ ನಿರ್ದೇಶನ ನೀಡಿದಂತಿರಲಿಲ್ಲ. ಇದು ರಾಜ್ಯ ಬಿಜೆಪಿ ನಾಯಕರ ತಲೆಬಿಸಿಗೂ ಕಾರಣವಾಗಿದೆ. ಈಚಿನ ಬೆಳವಣಿಗೆ ಬಗ್ಗೆ ಮುಖಾಮುಖೀ ಚರ್ಚೆಗೆ ಮುಂದಾದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬ ಆತಂಕವು ಕೆಲ ನಾಯಕರಲ್ಲಿ ಮನೆ ಮಾಡಿದೆ ಎನ್ನಲಾಗಿದೆ. ಒಟ್ಟಾರೆ ಅಮಿತ್ ಶಾ ಅವರ ಸೂಚನೆ ಬಳಿಕವಷ್ಟೇ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಇನ್ನಷ್ಟು ಶರವೇಗದಿಂದ ಸಜ್ಜಾಗುವ ಸಾಧ್ಯತೆ ಇದೆ ಎನ್ನಲಾಗಿದೆ. – ಎಂ. ಕೀರ್ತಿಪ್ರಸಾದ್