ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಚಿಕ್ಲಿ ಮತ್ತು ವಾಷಿಂ ರ್ಯಾಲಿಯಲ್ಲಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಎನ್‌ಸಿಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಯುಕೆಯಲ್ಲಿನ ಕಾಂಗ್ರೆಸ್ ಘಟಕವು ರಹಸ್ಯವಾಗಿ ಅಲ್ಲಿನ ಪ್ರತಿಪಕ್ಷ ಲೇಬರ್ ಪಾರ್ಟಿ ನಾಯಕ ಜೆರೆಮಿ ಕಾರ್ಬಿನ್‌ರನ್ನು ಭೇಟಿಯಾಗಿ ಕಾಶ್ಮೀರ ವಿಚಾರ ಕುರಿತು ಮಾತುಕತೆ ನಡೆಸಿರುವುದರ ಕುರಿತು ಪ್ರಸ್ತಾಪಿಸಿದ ಶಾ, “ಕೂಡಲೇ ರಾಹುಲ್‌ಗಾಂಧಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಮೂರನೆಯವರ ಹಸ್ತಕ್ಷೇಪ ಸಲ್ಲ ಎಂಬ ಭಾರತೀಯ ನಿಯಮಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ವರ್ತಿಸಿದೆ. ಈ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿ, ಕ್ಷಮೆ ಕೋರಬೇಕು ಎಂದಿದ್ದಾರೆ ಶಾ.
ಇದೇ ವೇಳೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಕೇವಲ ತಮ್ಮ ಕುಟುಂಬಗಳಿಗಾಗಿ ಕೆಲಸ ಮಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ದೇಶಕ್ಕಾಗಿ ಕೆಲಸ ಮಾಡುತ್ತಿದೆ ಎಂದೂ ಶಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, “ನನ್ನ ಹೆಸರನ್ನು ಜಪ ಮಾಡುವುದನ್ನು ಬಿಟ್ಟು, ದೇಶದ ಆರ್ಥಿಕತೆ, ಅನ್ನದಾತರ ಬಗ್ಗೆ ಮಾತನಾಡಿ’ ಎಂದಿದ್ದಾರೆ.
ಮೋದಿ 9 ರ್ಯಾಲಿ: ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 4 ದಿನಗಳ ಅವಧಿಯಲ್ಲಿ 9 ಚುನಾವಣಾ ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಮಾಹಿತಿ ನೀಡಿದ್ದಾರೆ. ಅ.18ರಂದು ಮುಂಬೈನಲ್ಲಿ ಬೃಹತ್ ರ್ಯಾಲಿ ನಡೆಯಲಿದೆ.
ಸ್ತ್ರೀಯರಿಗೆ ಉದ್ಯೋಗದಲ್ಲಿ ಶೇ.33 ಮೀಸಲಾತಿ: ಹರ್ಯಾಣ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ, ಪಂಚಾಯತ್ ರಾಜ್ ಸಂಸ್ಥೆಗಳು, ಮಹಾನಗರಪಾಲಿಕೆಗಳಲ್ಲಿ ಶೇ.50 ಮೀಸಲಾತಿ, ಬಸ್‌ಗಳಲ್ಲಿ ಉಚಿತ ಪ್ರಯಾಣ, ರೈತರ ಸಾಲ ಮನ್ನಾ ನೀಡುವುದಾಗಿ ಆಶ್ವಾಸನೆಗಳನ್ನು ನೀಡಿದೆ.