ಬೆಂಗಳೂರು/ ಹೊಸದಿಲ್ಲಿ: ರಾಷ್ಟ್ರ ರಾಜಧಾನಿಗೆ ಹೋಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶನಿವಾರ ಬೆಳಗ್ಗೆ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಮರಳಲು ಏರ್ ಪೋರ್ಟ್ ನತ್ತ ಬರುತ್ತಿರುವಾಗ ಸಿಎಂ ಬಿಎಸ್ ವೈ ಗೆ ಗೃಹ ಸಚಿವ ಅಮಿತ್ ಶಾ ಬುಲಾವ್ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ತಿರುಗಿ ಶಾ ಕಚೇರಿಯತ್ತ ಮರಳಿದ್ದಾರೆ ಎಂದು ವರದಿಯಾಗಿದೆ.
ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಮಧ್ಯಾಹ್ನ ಪುತ್ರರೊಂದಿಗೆ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರೂ ನಾಯಕರು ಸುಮಾರು ಅರ್ಧ ಗಂಟೆಗಳ ಕಾಲು ಮಾತುಕತೆ ನಡೆಸಿದ್ದರು. ಇದೇ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ, ಯಡಿಯೂರಪ್ಪನವರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ನವರಿಗೆ ದೂರಲು ಮೋದಿ ಬೇಕು, ಒಳ್ಳೆಯದಾದರೆ ಮೋದಿ ಬೇಡ: ಸಿ.ಟಿ.ರವಿ
ಇಂದು ಬೆಳಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಜೆ.ಪಿ.ನಡ್ಡಾ ಅವರನ್ನು ಬಿಎಸ್ ವೈ ಭೇಟಿಯಾಗಿದ್ದಾರೆ. ನಡ್ಡಾ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ವಿವರವಾಗಿ ಚರ್ಚೆ ನಡೆಸಿದ್ದೇವೆ. ನನ್ನ ಬಗ್ಗೆ ಅಧ್ಯಕ್ಷರು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. 2023ರ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ನಾನು ಶ್ರಮಿಸುತ್ತೇನೆ. ನಡ್ಡಾ ಅವರು ಕೂಡ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದರತ್ತ ಗಮನ ಹರಿಸಿ ಎಂದು ಸೂಚಿಸಿದ್ದಾರೆ. ನನ್ನ ಬಳಿ ಯಾರೂ ರಾಜೀನಾಮೆ ಕೇಳಿಲ್ಲ, ನಾಯಕತ್ವ ಬದಲಾವಣೆ ವಿಷಯ ಚರ್ಚೆಗೇ ಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಶಾಸಕ ಎಂ.ಪಿ ಕುಮಾರಸ್ವಾಮಿಯಿಂದ ಗ್ರಾಮ ಪಂಚಾಯಿತಿ ಸದಸ್ಯನಿಗೆ ಕೊಲೆ ಬೆದರಿಕೆ?
ಈ ಭೇಟಿಯ ಬಳಿಕ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಿಎಂ ನಿರ್ಧರಿಸಿದ್ದರು. ಆದರೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಅವರು ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನತ್ತ ಮುಖ ಮಾಡಿದ್ದರು. ಆದರೆ ಬಿಎಸ್ ವೈ ಗೆ ಶಾ ಭೇಟಿಗೆ ಸಮಯ ನೀಡಿದ್ದು, ಸಿಎಂ ಮರಳಿ ಅವರತ್ತ ಹೊರಟಿದ್ದಾರೆ ಎನ್ನಲಾಗಿದೆ.