ಭುವನೇಶ್ವರ: ಅಮಿತ್ ರೋಹಿದಾಸ್ ಅವರು ಮುಂಬರುವ ಜರ್ಮನಿ ವಿರುದ್ಧದ ಎಫ್ಐಎಚ್ ಪ್ರೊ ಲೀಗ್ ಹಾಕಿ ಕೂಟದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕೂಟ ಗುರುವಾರದಿಂದ ಆರಂಭವಾಗಲಿದೆ.
ಸ್ಟಾರ್ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಅವರು ಉಪನಾಯಕರಾಗಿ ತಂಡದ ಜವಾಬ್ದಾರಿ ವಹಿಸಲಿದ್ದಾರೆ. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕೂಟದ ಎರಡನೇ ಪಂದ್ಯ ಶುಕ್ರವಾರ ನಡೆಯಲಿದೆ.
ಭಾರತೀಯ ತಂಡದಲ್ಲಿ ದೊಡ್ಡ ಬದಲಾವಣೆ ಏನೂ ಇಲ್ಲ, ಆದರೆ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಶ್ಯನ್ ಗೇಮ್ಸ್ ನಡೆಯಲಿರುವ ಕಾರಣ ಪ್ರೊ ಲೀಗ್ ಕೂಟಗಳಲ್ಲಿ ಬಹಳಷ್ಟು ಪ್ರಯೋಗಗಳನ್ನು ಮುಂದುವರಿಸಲು ಭಾರತೀಯ ತಂಡ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ.
ಪಿ.ಆರ್. ಶ್ರೀಜೇಶ್, ಕೃಷ್ಣ ಬಹದೂರ್ ಪಾಠಕ್ ಗೋಲ್‌ಕೀಪರ್‌ಗಳಾಗಿ; ವರುಣ್ ಕುಮಾರ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ಜುಗ್ರಾಜ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್ ಮತ್ತು ಗುರೀಂದರ್ ಸಿಂಗ್ ಡಿಫೆಂಡರ್‌ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರೊ ಲೀಗ್‌ನಲ್ಲಿ ಭಾರತ ಈರವರೆಗೆ 10 ಪಂದ್ಯಗಳನ್ನು ಆಡಿದ್ದು, 21 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜರ್ಮನಿ 8 ಪಂದ್ಯಗಳನ್ನು ಆಡಿದ್ದು, 17 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.