ಅಮೀನಗಡ: ಮಲಪ್ರಭಾ ನದಿ ಪ್ರವಾಹಕ್ಕೆ ಸಮೀಪದ ಚಿತ್ತರಗಿ ಗ್ರಾಮದ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಮಲಪ್ರಭಾ ನದಿ ಭೀಕರ ಪ್ರವಾಹದಿಂದ ತಲ್ಲಣಗೊಂಡಿದ್ದ ಚಿತ್ತರಗಿ ಗ್ರಾಮದ ಜನ ಈಗ ಮತ್ತೂಮ್ಮೆ ಗ್ರಾಮಕ್ಕೆ ಪ್ರವಾಹದ ನೀರು ನುಗ್ಗಿದ್ದರಿಂದ ಭಯಭೀತರಾಗಿದ್ದಾರೆ.
ಮಂಗಳವಾರ ಸಂಜೆವರೆಗೆ ಗ್ರಾಮದಲ್ಲಿ ಕ್ಷಣಕ್ಕೊಮ್ಮೆ ನೀರು ಹೆಚ್ಚಾಗುತ್ತ ಹೋಗಿದೆ. ಆದರೆ ರಾತ್ರಿ ಪ್ರವಾಹ ನೀರು ಬರುವುದಿಲ್ಲ ಎಂದು ತಿಳಿದಿದ್ದ ಗ್ರಾಮಸ್ಥರಿಗೆ ರಾತ್ರಿಯಿಂದಲೇ ಬುಧವಾರ ಬೆಳಗಿನವರೆಗೂ ಬಂದ ಪ್ರವಾಹ ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಪಂ ಕಟ್ಟಡ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ವಿವಿಧ ಮಳಿಗೆಗೆಳು, ಬಸ್ ನಿಲ್ದಾಣ, ಸರ್ಕಾರಿ ಪ್ರಾಥಮಿಕ
ಆರೋಗ್ಯ ಕೇಂದ್ರ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ಹಾಸ್ಟೆಲ್, ವಿವಿಧ ಬ್ಯಾಂಕುಗಳು ಪ್ರವಾಹ ನೀರಿನಿಂದ ಜಲಾವೃತಗೊಂಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಹಬ್ಬದ ಸಂಭ್ರಮ ಕಸಿದ ಪ್ರವಾಹ: ದೀಪಾವಳಿ ಹಬ್ಬದ ತಯಾರಿಯಲ್ಲಿದ್ದ ಗ್ರಾಮಸ್ಥರಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಹರಿದ ಪ್ರವಾಹದ ಭೋರ್ಗರತೆ ನೀರು, ಆಗಸ್ಟ್ ತಿಂಗಳಿನಲ್ಲಿ ಬಂದು ಹೋದ ಪ್ರವಾಹದ ಕಹಿ ಘಟನೆ ಮತ್ತೆ ಮರುಕಳಿಸಿದೆ. ಇದರಿಂದ ಗ್ರಾಮದಲ್ಲಿ ಗಂಜಿಕೇಂದ್ರ ಸ್ಥಾಪಿಸಲಾಗಿದ್ದು, ಜನ ಗಂಜಿಕೇಂದ್ರದತ್ತ ಮುಖ ಮಾಡಿದ್ದಾರೆ.
ಈಗಾಗಲೇ 30ಕ್ಕೂ ಹೆಚ್ಚು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ನೂರಾರು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಸ್ಥಳಕ್ಕೆ ಎಸಿ ಭೇಟಿ: ಬುಧವಾರ ಬೆಳಗ್ಗೆ ಬಾಗಲಕೋಟೆ ಉಪವಿಭಾಗಾಧಿ ಕಾರಿ ಎಂ.ಗಂಗಪ್ಪ, ತಹಶೀಲ್ದಾರ್ ಆನಂದ ಕೋಲಾರ ಚಿತ್ತರಗಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಸಂಚಾರ ಬಂದ್: ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಹರಿದ ಪ್ರವಾಹದ ನೀರಿನಿಂದ ಚಿತ್ತರಗಿಯಿಂದ ಗಂಗೂರ, ಚಿತ್ತರಗಿಯಿಂದ ಕೂಲಸಂಗಮ ರಸ್ತೆ ಜಲಾವೃತವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೊರ ವಲಯಗಳಿಗೆ ಸಾರ್ವಜನಿಕರು ಪ್ರಯಾಣಿಸುವ ಎಲ್ಲ ಹೆದ್ದಾರಿ ಬಂದ್ ಆಗಿವೆ.