Advertisement

ಮುಷ್ಕರ ಮಧ್ಯೆ ಎಂದಿನಂತೆ ಎಲ್ಲವೂ ಸುಲಲಿತ

09:40 PM Jan 08, 2020 | Lakshmi GovindaRaj |

ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧವಾರ ಕಾರ್ಮಿಕರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು-ಮೈಸೂರು), ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಐಇಎ, ಎಈಎಲ್‌ಈಸಿಇಎಫ್, ಎಈಬಿಇಎ, ಬಿಇಎಫ್ಐ, ಬಿಎಸ್‌ಎನ್‌ಎಲ್‌ಇಯು, ಎನ್‌ಎಫ್ಪಿಇ,ಮೈಸೂರು ಜಿಲ್ಲಾ ಬ್ಯಾಂಕ್‌ ನೌಕರರ ಸಂಘ, ಇತರೆ ಬ್ಯಾಂಕ್‌ ಹಾಗೂ ಸ್ವತಂತ್ರ ಸಂಘಟನೆಗಳ ಆಶ್ರಯದಲ್ಲಿ ಪುರಭವನ ಆವರಣದಲ್ಲಿ ಸಮಾವೇಶಗೊಂಡ ಸಾವಿರಾರು ಕಾರ್ಮಿಕರು ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿದರು. ಕಾಂಗ್ರೆಸ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದರಿಂದ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಕೆಎಸ್ಸಾರ್ಟಿಸಿ ಬಸ್‌ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ. ಹೋಟೆಲ್‌ಗ‌ಳು, ಚಲನಚಿತ್ರ ಮಂದಿರಗಳು, ಅಂಗಡಿ–ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ಜನ ಜೀವನ ಸಹಜವಾಗಿತ್ತು. ಆದರೆ, ಬಂದ್‌ಗೆ ಕರೆಕೊಡಲಾಗಿದೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಸಾರಿಗೆ ಬಸ್‌ಗಳಲ್ಲಿ ಜನ ಸಂಚಾರ ಮಧ್ಯಾಹ್ನದವರೆಗೆ ವಿರಳವಾಗಿತ್ತು.

ದುಡಿಯುವ ಜನರಿಗೆ ರಾಷ್ಟ್ರವ್ಯಾಪಿ 21 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ಕಾರ್ಮಿಕ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳು ಸ್ಥಾಪನೆಯಾಗಬೇಕು. ಎಲ್ಲರಿಗೂ ಮಾಸಿಕ 10 ಸಾವಿರ ರೂ. ಮಾಸಿಕ ಪಿಂಚಣಿ ಖಾತ್ರಿ ದೊರೆಯಬೇಕು. ಬೆಲೆ ಏರಿಕೆ ನಿಯಂತ್ರಣ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಯಾಗಬೇಲು. ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ,

ಅದರಿಂದಾಗಿ ಉದ್ಯೋಗ ಕಳೆದುಕೊಳ್ಳುವ ಕಾರ್ಮಿಕರ ಉದ್ಯೋಗ, ವೇತನ, ಗಳಿಕೆಯ ರಕ್ಷಣೆಗಾಗಿ, ಉದ್ಯೋಗ ಸೃಷ್ಟಿಯ ಕ್ರಮಗಳಿಗಾಗಿ, ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಿಣಿಗಾಗಿ, ಸಾಮಾಜಿಕ ಭದ್ರತಾ ಮಂಡಳಿಗಳಿಗೆ ನಿಧಿಗಾಗಿ ಹಾಗೂ ಕಲ್ಯಾಣ ಯೋಜನೆಗಳಿಗಾಗಿ, ಗುತ್ತಿಗೆ ಪದ್ಧತಿ ನಿಯಂತ್ರಣಕ್ಕಾಗಿ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ, ಗುತ್ತಿಗೆ ಮುಂತಾದ ಕಾಯಂಯೇತರರ ಕಾಯಂಗೆ ಶಾಸನಕ್ಕಾಗಿ,

Advertisement

ಎಫ್ಟಿಇ, ನೀಮ್‌, ನೀಸಾ ಮುಂತಾದ ಪದ್ಧತಿ ರದ್ಧತಿಗಾಗಿ, ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಾಗಿ, ಡಾ.ಸ್ವಾಮಿನಾಥನ್‌ ವರದಿ ಜಾರಿಗಾಗಿ, ಸಾಲಮನ್ನಾ, ರೈತರ ಆತ್ಮಹತ್ಯೆ ತಡೆಗಾಗಿ, ಗ್ರಾಮೀಣ ಉದ್ಯೋಗ ಖಾತ್ರಿ, ಯೋಜನೆಯನ್ನು ಬಲಪಡಿಸಬೇಕು. ಸಾರ್ವಜನಿಕ ಉದ್ದಿಮೆಗಳ ಶೇರು ವಿಕ್ರಯ ವಿರೋಧಿಸಿ, ರಕ್ಷಣಾ ವಲಯದಲ್ಲಿನ ಸಾರ್ವಜನಿಕ ಉದ್ದಿಮೆಗಳ, ರೈಲ್ವೆ ಮುಂತಾದ ಇಲಾಖೆಗಳ ಖಾಸಗೀಕರಣ ವಿರೋಧಿಸಿ, ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್‌,

ವಿಮೆ ಮುಂತಾದ ನಿರ್ಣಾಯಕ ಆಯಕಟ್ಟಿನ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಿ, ಸ್ಕೀಂ ನೌಕರರನ್ನು ನೌಕರರೆಂದು ಪರಿಗಣಿಸಬೇಕೇಂಬ ಭಾರತ ಕಾರ್ಮಿಕ ಸಮ್ಮೇಳನದ ತೀರ್ಮಾನ ಜಾರಿಗಾಗಿ, ಸ್ಕೀಂ ನೌಕರರ ಖಾಸಗೀಕರಣಕ್ಕೆ ವಿರೋಧ ಸೇರಿದಂತೆ 12 ಅಂಶಗಳ ಬೇಡಿಕೆಗಾಗಿ ಕಾರ್ಮಿಕರು ಒತ್ತಾಯಿಸಿದರು. ಸಿಐಟಿಯುನ ಸೋಮೇಶ್‌, ಎಐಟಿಯುಸಿ ಯಶೋಧರ್‌, ಇಂಟಕ್‌ನ ಅನಿಲ್‌ಕುಮಾರ್‌,

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ.ಜಯರಾಮ್‌, ಎಐಯುಟಿಯುಸಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ವಿಮಾ ನೌಕರರ ಸಂಘದ ನಾಗೇಶ್‌, ಬಲರಾಂ, ಬ್ಯಾಂಕ್‌ ನೌಕರರ ಸಂಘದ ಬಾಲಕೃಷ್ಣ, ಸ್ವತಂತ್ರ ಸಂಘಟನೆಯ ಪ್ಯಾಟ್ರಿಕ್‌ ಹಾಜರಿದ್ದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ಸುಮಾರು 3ಸಾವಿರ ಜನರು ಮುಷ್ಕರದಲ್ಲಿ ಭಾಗವಹಿಸಿದ್ದರು.

ಸರ್ಕಾರಕ್ಕೆ ಕಾರ್ಮಿಕರ ಎಚ್ಚರಿಕೆ: ಕಾರ್ಮಿಕ ಸಂಘಟನೆಗಳ ಕೇಂದ್ರ ಸಮಿತಿ ಕರೆ ನೀಡಿದ್ದ ಮುಷ್ಕರ ದೇಶದ ಎಲ್ಲಾ ಭಾಗಗಳಲ್ಲಿ ಯಶಸ್ವಿಯಾಗಿದೆ. ಮುಷ್ಕರ ಕೆಲವೆಡೆ ಸ್ವಯಂಪ್ರೇರಿತ ಬಂದ್‌ ಆಗಿ ಪರಿವರ್ತನೆಯಾಗಿದೆ. ಅನ್ಯಾಯ, ತುಳಿತಕ್ಕೊಳಗಾದವರು ಇಂದಿನ ಮುಷ್ಕರಕ್ಕೆ ಬೆಂಬಲ ಕೊಟ್ಟಿದ್ದಾರೆ. ಮುಷ್ಕರ ಅತ್ಯಂತ ಯಶಸ್ವಿಯಾಗಿರುವುದು ಆಳುವ ಸರ್ಕಾರಕ್ಕೆ ಕಾರ್ಮಿಕರು ಕೊಟ್ಟಿರುವ ಎಚ್ಚರಿಕೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ತಿಳಿಸಿದ್ದಾರೆ.

ಸರಿದೂಗಿಸುವ ರಜೆ: ಮೈಸೂರು ಕೈಗಾರಿಕೆಗಳ ಸಂಘದಿಂದ ಸಂಘದ ವ್ಯಾಪ್ತಿಯಲ್ಲಿನ ಸುಮಾರು 2.5 ಲಕ್ಷ ಕಾರ್ಮಿಕರಿಗೆ ಬುಧವಾರ ಸರಿದೂಗಿಸುವ ರಜೆ ನೀಡಲಾಗಿದ್ದು, ಈ ದಿನಕ್ಕೆ ಬದಲಾಗಿ ಕಾರ್ಮಿಕರು ಭಾನುವಾರ ಕೆಲಸ ಮಾಡಲು ಒಪ್ಪಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಸುರೇಶ್‌ಕುಮಾರ್‌ ಜೈನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next