ಹೊಸದಿಲ್ಲಿ: ಭಾರತ ಮತ್ತು ಚೀನದ ನಡುವಿನ ಗಡಿ ಬಿಕ್ಕಟ್ಟು ಚಳಿಗಾಲದಲ್ಲೂ ಮುಂದುವರಿಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿರುವಂತೆಯೇ ಭಾರತವು ತ್ವರಿತಗತಿಯಲ್ಲಿ “ಚಳಿಗಾಲದ ಯುದ್ಧಸಂಬಂಧಿ ಕಿಟ್’ಗಳನ್ನು ಖರೀದಿಸಿದೆ. ಈ ಮೂಲಕ ಚೀನ ಸೇನೆಯನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಯೋಧರು ಸನ್ನದ್ಧರಾಗಿದ್ದಾರೆ ಎಂಬ ಸಂದೇಶವನ್ನು ರವಾನಿಸಿದೆ.
ಕಳೆದ ಜೂನ್ 14ರಿಂದಲೂ ಲಡಾಖ್‌ನಲ್ಲಿ ಎರಡೂ ಸೇನೆಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಹಲವು ಸುತ್ತಿನ ಮಾತುಕತೆ ನಡೆದಿದ್ದರೂ, ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲದೇ, ಚೀನದ ಸಾವಿರಾರು ಸೈನಿಕರು ಗಡಿಯಲ್ಲಿ ಜಮಾವಣೆಗೊಂಡಿದ್ದು, ಹಿಮಾಲಯದ ಗಡಿಯಲ್ಲಿ ಟ್ಯಾಂಕ್‌ಗಳು, ಕ್ಷಿಪಣಿಗಳನ್ನೂ ಚೀನಾ ನಿಯೋಜಿಸಿದೆ. ಚೀನದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯೂ ಸನ್ನದ್ಧವಾಗಿದ್ದು, ಸಮುದ್ರಮಟ್ಟದಿಂದ 15 ಸಾವಿರ ಅಡಿ ಎತ್ತರದಲ್ಲಿ ಯೋಧರು ನಿಯೋಜಿತರಾಗಿದ್ದಾರೆ.
ಅಮೆರಿಕಕ್ಕೆ ಸೇನಾಧಿಕಾರಿ: ಈಗಾಗಲೇ ಭಾರತವು ಇಂಧನ, ಸಮರ ನೌಕೆಗಳು ಹಾಗೂ ವಿಮಾನಗಳ ಬಿಡಿಭಾಗಗಳು ಸೇರಿದಂತೆ ಹಲವು ಯುದ್ಧ ಸಂಬಂಧಿ ಪರಿಕರಗಳನ್ನು ಖರೀದಿಸುವ ವಿಚಾರದಲ್ಲಿ ಪರಸ್ಪರ ಸಹಕಾರ ನೀಡುವ ಸಂಬಂಧ ಅಮೆರಿಕ ದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ, ಚಳಿಗಾಲಕ್ಕೆ ಅಗತ್ಯವಿರುವ ಯುದ್ಧ ಸಂಬಂಧಿ ಕಿಟ್‌ಗಳನ್ನು ಈಗ ಅಮೆರಿಕದಿಂದ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಸೇನೆಯು ಈ ಕುರಿತು ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ, ಸೇನೆಯ ಉನ್ನತ ಅಧಿಕಾರಿಯೊಬ್ಬರು ಅಮೆರಿಕಕ್ಕೆ ಭೇಟಿ ನೀಡಿರುವುದು ದೃಢಪಟ್ಟಿದೆ.
ಟ್ವಿಟರ್‌ನಿಂದ ಸ್ಪಷ್ಟೀಕರಣ: ಜಮ್ಮು-ಕಾಶ್ಮೀರವನ್ನು ಚೀನದ ಭೂಪ್ರದೇಶ ಎಂದು ತೋರಿಸಿ ಭಾರೀ ಟೀಕೆಗೆ ಒಳಗಾದ ಟ್ವಿಟರ್ ಸೋಮವಾರ ಈ ವಿಚಾರ ಸಂಬಂಧ ಸ್ಪಷ್ಟೀಕರಣ ನೀಡಿದೆ. “ಇದು ತಾಂತ್ರಿಕ ಸಮಸ್ಯೆಯಿಂದ ಆದ ಲೋಪ. ಈಗ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಇಂಥ ವಿಚಾರದಲ್ಲಿನ ಸಂವೇದನೆಗಳನ್ನು ನಾವು ಗೌರವಿಸುತ್ತೇವೆ. ಅಲ್ಲದೆ, ಈ ಲೋಪ ಕುರಿತು ಆಂತರಿಕ ತನಿಖೆಗೂ ಆದೇಶಿಸುತ್ತೇವೆ’ ಎಂದು ಹೇಳಿದೆ. ನೇರ ಪ್ರಸಾರವೊಂದರ ಲೊಕೇಷನ್ ಟ್ಯಾಗ್‌ನಲ್ಲಿ ಟ್ವಿಟರ್ ಜಮ್ಮು ಮತ್ತು ಕಾಶ್ಮೀರವನ್ನು ಚೀನದ ಭೂಭಾಗ ಎಂದು ಇತ್ತೀಚೆಗೆ ತೋರಿಸಿತ್ತು.
ನೌಕಾ ಮೈತ್ರಿಗೆ ಕ್ವಾಡ್ ಬಲ: ಚೀನಗೆ ಸಡ್ಡು
ನವೆಂಬರ್‌ನಲ್ಲಿ ಅರಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ನಡೆಯಲಿರುವ ನೌಕಾ ಕವಾಯತಿನಲ್ಲಿ ಆಸ್ಟ್ರೇಲಿಯಾವನ್ನು ಕೂಡ ಸೇರ್ಪಡೆ ಮಾಡುವ ಮೂಲಕ ಭಾರತವು, ಗಡಿ ತಕರಾರು ಮಾಡುತ್ತಿರುವ ಚೀನಗೆ ಸಡ್ಡು ಹೊಡೆದಿದೆ. ಮಲಬಾರ್ ಸಮರಾಭ್ಯಾಸದಲ್ಲಿ ಭಾರತದೊಂದಿಗೆ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಸೇನೆಯೂ ಪಾಲ್ಗೊಳ್ಳಲಿದೆ. ಈ ಮೂಲಕ “ಕ್ವಾಡ್’ನ ಎಲ್ಲ ನಾಲ್ಕು ಸದಸ್ಯರಾಷ್ಟ್ರಗಳು ಈ ಮೆಗಾ ಡ್ರಿಲ್‌ನಲ್ಲಿ ಭಾಗವಹಿಸಿದಂತಾಗಲಿದೆ. ಆರಂಭದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಮಾತ್ರ ಈ ಕವಾಯತು ನಡೆಯುತ್ತಿತ್ತು. 2015ರಲ್ಲಿ ಇದಕ್ಕೆ ಜಪಾನ್ ಅನ್ನು ಸೇರ್ಪಡೆಗೊಳಿಸಲಾಯಿತು. ಈಗ ಆಸ್ಟ್ರೇಲಿಯಾ ಕೂಡ ಸೇರ್ಪಡೆಯಾಗಿರುವುದು, ನೌಕಾ ಭದ್ರತಾ ವಲಯದಲ್ಲಿ ಇತರೆ ದೇಶಗಳೊಂದಿಗಿನ ಸಹಕಾರ ವೃದ್ಧಿ ನಿಟ್ಟಿನಲ್ಲಿ ಮಹತ್ವ ಪಡೆದಿದೆ.