ನವದೆಹಲಿ: ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಸಂಘರ್ಷವನ್ನು ಎದುರಿಸುತ್ತಿರುವ ನಡುವೆಯೇ ಜುಲೈ ಅಂತ್ಯದೊಳಗೆ ಭಾರತಕ್ಕೆ ಫ್ರಾನ್ಸ್ ನಿಂದ ಬಹುನಿರೀಕ್ಷಿತ ರಫೇಲ್ ಯುದ್ಧ ವಿಮಾನ ಭಾರತದ ಸೇನಾಪಡೆಗೆ ಸೇರ್ಪಡೆಯಾಗಲಿದೆ ಎಂದು ವರದಿ ತಿಳಿಸಿದೆ.
ಜುಲೈ ಅಂತ್ಯದೊಳಗೆ ಮೊದಲ ಹಂತವಾಗಿ ನಾಲ್ಕು ರಫೇಲ್ ಯುದ್ಧ ವಿಮಾನಗಳು ಭಾರತದ ವಾಯುಸೇನೆಗೆ ಸೇರಲಿದೆ ಎಂದು ಹೇಳಿದೆ. ಭಾರತಕ್ಕೆ ರಫೇಲ್ ಯುದ್ಧ ವಿಮಾನ ಆಗಮಿಸುವ ನಿಖರ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ ಎಂದು ವರದಿ ವಿವರಿಸಿದೆ.
ಭಾರತ ಮತ್ತು ಫ್ರಾನ್ಸ್ ನಲ್ಲಿ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿಳಿಯುವ ದಿನಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಹಾಲಿ ಶೆಡ್ಯೂಲ್ ಪ್ರಕಾರ ರಫೇಲ್ ಯುದ್ಧ ವಿಮಾನ ಮೇ ಕೊನೆಯಲ್ಲಿ ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ ಕೋವಿಡ್ 19ರಿಂದಾಗಿ ವಿಳಂಬವಾಗಿರುವುದಾಗಿ ಹೇಳಿದೆ. ಎರಡು ಸೀಟುಗಳಿರುವ ಮೂರು ಹಾಗೂ ಸಿಂಗಲ್ ಸೀಟರ್ ನ ಒಂದು ಸೇರಿ ಒಟ್ಟು ನಾಲ್ಕು ಯುದ್ಧ ವಿಮಾನ ಭಾರತಕ್ಕೆ ಆಗಮಿಸಲಿದೆ.
ಫ್ರಾನ್ಸ್ ನಿಂದ ಬರಲಿರುವ ರಫೇಲ್ ಯುದ್ಧ ವಿಮಾನ ಪಾಕಿಸ್ತಾನದ ಗಡಿಯಲ್ಲಿರುವ ಹರ್ಯಾಣ ರಾಜ್ಯದ ಅಂಬಲಾ ವಾಯುನೆಲೆಯಲ್ಲಿ ಇರಿಸಲಾಗುತ್ತದೆ. ಅಂಬಾಲಾ ವಾಯುನೆಲೆ ಭೌಗೋಳಿಕವಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ.
ಮತ್ತೊಂದೆಡೆ ಭಾರತದ 7 ಮಂದಿ ತಂಡ ಫ್ರಾನ್ಸ್ ಗೆ ತೆರಳಿ ರಫೇಲ್ ಯುದ್ಧ ವಿಮಾನ ಕುರಿತಂತೆ ತರಬೇತಿ ಪಡೆದುಕೊಂಡು ಬಂದಿದ್ದಾರೆ ಎಂದು ವರದಿ ತಿಳಿಸಿದೆ.