ಕೊಹಿಮಾ : 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಮಣಿಸಲು ವಿಪಕ್ಷಗಳು ಒಗ್ಗೂಡಲಿವೆಯೇಎನ್ನುವ ಸಂಶಯಗಳ ನಡುವೆಯೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ವಿಪಕ್ಷಗಳನ್ನು ಕಾಂಗ್ರೆಸ್ ಮುನ್ನಡೆಸಲಿದೆ. 2024ಕ್ಕೆ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಕೇಂದ್ರಸರ್ಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಕರ್ನಾಟಕ, ಮಣಿಪುರ, ಗೋವಾ, ಮಧ್ಯಪ್ರದೇಶದಲ್ಲಿ ಶಾಸಕರ ಮೇಲೆ ಒತ್ತಡ ಹೇರಿ ಚುನಾಯಿತ ಸರ್ಕಾರವನ್ನು ಬಿಜೆಪಿ ಪತನಗೊಳಿಸುತ್ತಿದೆ ಎಂದು ಹರಿಹಾಯ್ದರು. ಬಿಜೆಪಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಪ್ರಜಾಪ್ರಭುತ್ವವನ್ನು ರಕ್ಷಿಸಲು, ಸಂವಿಧಾನವನ್ನು ಅನುಸರಿಸಲು ಕಾಂಗ್ರೆಸ್ ನೇತೃತ್ವದ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬರಬೇಕು. 2024ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಒಕ್ಕೂಟ ಸರ್ಕಾರ ರಚಿಸಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ವಿಪಕ್ಷಗಳ ಜತೆಗೆ ನಾವು ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಾಗಾಲ್ಯಾಂಡ್‌ನಲ್ಲಿ ಚುನಾವಣೆ ರ್ಯಾಲಿಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದು, ಈಶಾನ್ಯ ರಾಜ್ಯಗಳ ಶಾಂತಿಗೆ ಕೇಂದ್ರ ಸರ್ಕಾರದ ಕೊಡುಗೆಯನ್ನು ಜನತೆಗೆ ನೆನಪಿಸಿದ್ದಾರೆ.
ಅಲ್ಲದೇ, ನಾಗಾ ಶಾಂತಿ ಮಾತುಕತೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ಈ ಮಹತ್ತರ ಉಪಕ್ರಮಗಳ ಪ್ರತಿಫಲ ಶೀಘ್ರ ದೊರೆಯಲಿದೆ ಎಂದಿದ್ದಾರೆ.