ಲಕ್ನೋ: ವಿವಾದದ ನಡುವೆಯೇ ಉತ್ತರಪ್ರದೇಶದಾದ್ಯಂತ ಈವರೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿನ ಸುಮಾರು 45,773 ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಶನಿವಾರ(ಏ.30) ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ತೃತೀಯ ರಂಗಕ್ಕೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಪ್ರಶಾಂತ್ ಕಿಶೋರ್
ಉತ್ತರಪ್ರದೇಶದ ಹೆಚ್ಚುವರಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಶಾಂತ್ ಕುಮಾರ್ ಅವರು ಎಎನ್ ಐ ಜತೆಗೆ ಮಾತನಾಡಿದ್ದು, ರಾಜ್ಯಾದ್ಯಂತ ಈವರೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿನ 45,773 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಅಷ್ಟೇ ಅಲ್ಲ ನಿಯಮಾನುಸಾರ 58,861 ಲೌಡ್ ಸ್ಪೀಕರ್ ಗಳ ಶಬ್ದದ ಪ್ರಮಾಣವನ್ನು ಕಡಿತಗೊಳಿಸಲಾಗಿದೆ ಎಂದು ವಿವರ ನೀಡಿದ್ದಾರೆ.
ಧಾರ್ಮಿಕ ಕ್ಷೇತ್ರಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸುವುದಾಗಿ ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದ ನಂತರ ಪೊಲೀಸ್ ಇಲಾಖೆ ಈ ಮಾಹಿತಿ ಹಂಚಿಕೊಂಡಿರುವುದಾಗಿ ವರದಿ ತಿಳಿಸಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾ(ದ) ವರಿಷ್ಠ ರಾಜ್ ಠಾಕ್ರೆ ಕೂಡಾ ಮಸೀದಿಗಳಲ್ಲಿ ಇರುವ ಲೌಡ್ ಸ್ಪೀಕರ್ ಗಳನ್ನು ಮೇ 3ರೊಳಗೆ ತೆರವುಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಅಂತಿಮ ಗಡುವು ನೀಡಿರುವುದಾಗಿ ವರದಿ ಹೇಳಿದೆ.