ಇಸ್ಲಾಮಾಬಾದ್ : ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವ ವಿಷಯದಲ್ಲಿನ ಬಿಕ್ಕಟ್ಟು – ಉದ್ವಿಗ್ನತೆ ಮುಂದುವರಿದಿರುವಂತೆಯೇ, ಪಾಕಿಸ್ಥಾನದ ಆಜಾದ್ ಜಮ್ಮು ಕಾಶ್ಮೀರ (ಎಜೆಕೆ) ಪೊಲೀಸರು ತಾವು ಮೂವರು ಶಂಕಿತ ರಾ (ಭಾರತೀಯ ಬೇಹು ಸಂಸ್ಥೆ) ಏಜಂಟರನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಡಾನ್ ಸುದ್ದಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಈ ಶಂಕಿತ ರಾ ಏಜಂಟರು ಪೊಲೀಸ್ ಠಾಣೆಯೊಂದರ ಬಾಂಬಿಂಗ್ ಸೇರಿದಂತೆ ಹಲವು ಸಮಾಜ ವಿರೋಧಿ ಹಾಗೂ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಶಂಕಿತ ರಾ ಏಜಂಟರನ್ನು ಪಾಕ್ ಪೊಲೀಸರು ಮೊಹಮ್ಮದ್ ಖಲೀಲ್, ಇಮಿ¤ಯಾಜ್ ಮತ್ತು ರಶೀದ್ ಎಂದು ಗುರುತಿಸಿದ್ದು ಇವರೆಲ್ಲರೂ ಅಬ್ಟಾಸ್‌ಪುರದಲ್ಲಿ ತಾರೋತಿ ಗ್ರಾಮದ ವಾಸಿಗಳೆಂದು ಹೇಳಿದ್ದಾರೆ.
ಮುಖ್ಯ ಶಂಕಿತ ಖಲೀಲ್ 2014ರ ನವೆಂಬರ್‌ನಲ್ಲಿ ಆಜಾದ್ ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದಾನೆ. ಬಂದಿ ಚೇಚಿಯಾನ್ ಗ್ರಾಮದಲ್ಲಿನ ತನ್ನ ಸಂಬಂಧಿಕರನ್ನು ಕಾಣಲು ಇಲ್ಲಿಗೆ ಬಂದಿದ್ದ ಆತ ಅಲ್ಲಿ ರಾ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದಾನೆ. ಅವರು ಆತನನ್ನು ತಮಗಾಗಿ ದುಡಿಯುವಂತೆ ಆಮಿಷ ಒಡ್ಡಿದ್ದಾರೆ ಎಂದು ಪೂಂಚ್‌ನ ಡೆಪ್ಯುಟಿ ಪೊಲೀಸ್ ಸುಪರಿಂಟೆಂಡೆಂಟ್ ಸಾಜಿದ್ ತಿಳಿಸಿದ್ದಾರೆ.
ಡಿಎಸ್‌ಪಿ ಇಮ್ರಾನ್ ತಿಳಿಸಿರುವ ಪ್ರಕಾರ ಖಲೀಲ್ ಸಾಮಾನ್ಯವಾಗಿ ತನ್ನೊಂದಿಗೆ ಸಿಗರೇಟು ಮತ್ತು ಮೊಬೈಲ್ ಫೋನ್ ಮೆಮರಿ ಕಾರ್ಡ್‌ಗಳನ್ನು ಒಯ್ಯುತ್ತಾನೆ. ಜತೆಗೆ ಈತನ ಬಳಿಕ ದೇವಬಂದಿ ಇಸ್ಲಾಮಿಕ್ ವಿಚಾರಧಾರೆಯ ಮಸೀದಿಗಳು, ಸೇತುವೆಗಳು, ಸೇನೆ ಮತ್ತು ಪೊಲೀಸ್ ಘಟಕಗಳ ಚಿತ್ರಗಳನ್ನು ಆತ ಹೊಂದಿರುತ್ತಾನೆ. ಆತನು ತನ್ನ ಬಳಿ ಇರುವ ಮತ್ತು ತನ್ನ ಹೆಸರಲ್ಲಿ ನೋಂದಾವಣೆ ಹೊಂದಿರುವ ಎರಡು ಕ್ರಿಯಾಶೀಲ ಸಿಮ್ ಕಾರ್ಡ್‌ಗಳನ್ನು ಭಾರತೀಯ ಅಧಿಕಾರಿಗಳಿಗೆ ಕೊಟ್ಟದ್ದಾನೆ.
ಈ ಶಂಕಿತ ರಾ ಏಜಂಟ್‌ಗಳು 2016ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಅಬ್ಟಾಸ್‌ಪುರ ಬ್ಲಾಸ್ಟ್ ನಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ರಾ ಅಧಿಕಾರಿಗಳು ಈ ಶಂಕಿತರಿಗೆ ಸಂಯುಕ್ತ ಮಿಲಿಟರಿ ಆಸ್ಪತ್ರೆ ಮತ್ತು ಸಿಪಿಇಸಿ ಪ್ರಾಜೆಕ್ಟ್ಗಳನ್ನು, ಚೀನದ ಇಂಜಿನಿಯರ್‌ಗಳನ್ನು ಹಾಗೂ ಇತರ ಕೆಲವು ಸೂಕ್ಷ್ಮ ಮೂಲ ಸೌಕರ್ಯ ಘಟಕಗಳನ್ನು ಗುರಿ ಇರಿಸಿ ಉಗ್ರ ದಾಳಿ ನಡೆಸುವ ಹೊಣೆಗಾರಿಕೆಯನ್ನು ಕೊಟ್ಟಿದ್ದಾರೆ ಎಂದು ಪೂಂಚ್ ವಿಭಾಗದ ಪೊಲೀಸ್ ಡಿಐಜಿ ಚೌಧರಿ ಸಜ್ಜದ್ ಅವರನ್ನು ಉಲ್ಲೇಖೀಸಿ ದುನ್ಯಾನೂಸ್ ವರದಿ ಮಾಡಿದೆ.
ಈ ಶಂಕಿತರು ಭಾರತೀಯ ಸೇನಾಧಿಕಾರಿಗಳನ್ನು ಹಾಗಿಊ ರಾ ಅಧಿಕಾರಿಗಳನ್ನು ಕಾಣಲು ಹಲವು ಬಾರಿ ನೈಜ ಗಡಿ ನಿಯಂತ್ರಣ ರೇಖೆ ದಾಟಿದ್ದಾರೆ. ಈ ಶಂಕಿತರು ಮೇಜರ್ ರಣ್‌ಜಿತ್, ಮೇಜರ್ ಸುಲ್ತಾನ್ ಮತ್ತು ಸುಬೇದಾರ್ ಸಂದೀಪ್ ಅವರ ಸಂಪರ್ಕದಲ್ಲಿ ಇದ್ದರು ಎಂದು ದುನ್ಯಾನ್ಯೂಸ್ ವರದಿ ಮಾಡಿದೆ.