ಬನಿಹಾಲ್/ಜಮ್ಮು:ಭಾರೀ ಹಿಮಪಾತದ ಹಿನ್ನೆಲೆಯಲ್ಲಿ ಬನಿಹಾಲ್ ಸೇರಿದಂತೆ ಜಮ್ಮು-ಶ್ರೀನಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಗಿತಗೊಂಡಿದ್ದ ಮಿನಿ ಟ್ರಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಭಾರೀ ಪ್ರಮಾಣದಲ್ಲಿ ಹಿಮಪಾತ ಸುರಿದ ಪರಿಣಾಮ ಕಾಶ್ಮೀರವನ್ನು ಸಂಪರ್ಕಿಸುವ 270 ಕಿಲೋ ಮೀಟರ್ ಉದ್ದದ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಭಾನುವಾರ ಮಧ್ಯಾಹ್ನದಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಮಿನಿ ಟ್ರಕ್ ನಲ್ಲಿ ಶ್ರೀನಗರದತ್ತ ತೆರಳುತ್ತಿದ್ದ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕ್ರಾಲ್ ಪೋರಾ ಗ್ರಾಮದ ಶಬೀರ್ ಅಹ್ಮದ್ ಮೀರ್ (22ವರ್ಷ) ಹಾಗೂ ಮಜೀದ್ ಗುಲ್ಜಾರ್ ಮೀರ್(30ವರ್ಷ) ವಿಪರೀತ ಹಿಮಪಾತದಿಂದಾಗಿ ಜವಾಹರ್ ಸುರಂಗ ಮಾರ್ಗದ ಸಮೀಪ ಶನಿವಾರ ಬೆಳಗ್ಗೆ ಗೇಟ್ ಬಂದ್ ಮಾಡಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ಭಾನುವಾರ ಬೆಳಗ್ಗೆ ಟ್ರಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ(ಜನವರಿ 25, 2021) ಬೆಳಗ್ಗೆ ವಾಹನದೊಳಗೆ ಇಬ್ಬರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರನ್ನು ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿ ಹೇಳಿದೆ.
ಇಬ್ಬರು ಮೈಕೊರೆಯುವ ವಿಪರೀತ ಹಿಮದಿಂದಾಗಿ ಅಥವಾ ಉಸಿರುಗಟ್ಟಿ ಸಾವನ್ನಪ್ಪಿದ್ದರೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಅವರು ವಾಹನದೊಳಗೆ ಹೀಟರ್ ಅನ್ನು ಇಟ್ಟುಕೊಂಡಿದ್ದರು. ಅಲ್ಲದೇ ರಾತ್ರಿ ಬೆಚ್ಚಗಾಗಿರಲು ಕಲ್ಲಿದ್ದಲಿನ ಬೆಂಕಿಯನ್ನು ಮಾಡಿರುವುದು ತಿಳಿದು ಬಂದಿದೆ.
ಘಟನೆಯನ್ನು ಖಂಡಿಸಿ ಬನಿಹಾಲ್ ರೈಲ್ವೆ ಚೌಕ್ ಸಮೀಪ ಲಾರಿ ಚಾಲಕರು ಮತ್ತು ಕ್ಲೀನರ್ ಗಳು ತೀವ್ರ ಪ್ರತಿಭಟನೆ ನಡೆಸಿ, ಇಬ್ಬರ ಸಾವಿಗೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.