Advertisement
ಮಂಗಳವಾರ(ಜು.2ರಂದು) ರತಿಭಾನಪುರದಲ್ಲಿ ನಡೆದ ಭೋಲೆಬಾಬಾ ಪ್ರವಚನ ಕಾರ್ಯಕ್ರಮದ ನಂತರ ಈ ದುರ್ಘಟನೆ ನಡೆದಿದೆ. ಮಕ್ಕಳು ಮಹಿಳೆಯುರ ಹಾಗೂ ಪುರುಷರು ಸೇರಿ ಇದುವರೆಗೆ 121 ಮಂದಿ ಬಲಿಯಾಗಿದ್ದಾರೆ.
Related Articles
Advertisement
ವೈಷ್ಣೋದೇವಿ ದೇವಸ್ಥಾನದಲ್ಲಿ ಕಾಲ್ತುಳಿತ: (ಜ.1,2022): ವರ್ಷದ ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದ ದರ್ಶನಕ್ಕೆ ನೆರೆದಿದ್ದ ಅಪಾರ ಜನರಿಂದ ಕಾಲ್ತುಳಿತ ಉಂಟಾಗಿತ್ತು. ಈ ಘಟನೆಯಲ್ಲಿ 12 ಮಂದಿ ಮೃತಪಟ್ಟು, 16 ಮಂದಿ ಗಾಯಗೊಂಡಿದ್ದರು. ದೇವಸ್ಥಾನದಲ್ಲಿ ಗೇಟ್ ನಂ. 3 ರ ಸಮೀಪ ಜನಸಂದಣಿಯಿಂದ ಈ ಘಟನೆ ನಡೆದಿತ್ತು.
ಪುಷ್ಕರ ಮೇಳ ಕಾಲ್ತುಳಿತ ದುರಂತ:(ಜು.14, 2015); ದಕ್ಷಿಣದ ಕುಂಭಮೇಳ ಎಂದೇ ಹೆಸರು ಪಡೆದಿರುವ ಆಂಧ್ರದ ಪವಿತ್ರ ಗೋದಾವರಿ ಮಹಾ ಪುಷ್ಕರ ಮೇಳ 2015 ರಲ್ಲಿ ನಡೆದಿತ್ತು. ಈ ವೇಳೆ ಲಕ್ಷಾಂತರ ಭಕ್ತರು ರಾಜಮಂಡ್ರಿಯ ಪುಷ್ಕರ ಘಾಟ್ ನ ನದಿಯಲ್ಲಿ ಪುಣ್ಯ ಸ್ನಾನ ಮಾಡಲೆಂದು ದೂರ ದೂರದ ಊರಿನಿಂದ ಬರುತ್ತಾರೆ.
ಜು.14 ರಂದು ಕೂಡ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕೆ ನದಿ ದಡದತ್ತ ಬಂದಿದ್ದರು. ಈ ವೇಳೆ ನೂಕುನುಗ್ಗಲುನಿಂದಾಗಿ ಕಾಲ್ತುಳಿತ ಉಂಟಾಗಿ, ಉಸಿರಾಟದ ಸಮಸ್ಯೆಯಿಂದ 27 ಮಂದಿ ಭಕ್ತರು ಪ್ರಾಣಕಳೆದುಕೊಂಡಿದ್ದರು. ಈ ಘಟನೆ ಆಂಧ್ರದಲ್ಲಿ ರಾಜಕೀಯವಾಗಿ ಚರ್ಚೆ ಹುಟ್ಟಿಹಾಕಿತ್ತು. ವಿಐಪಿಗಳ ಆಗಮನಕ್ಕೆ ವಿಶೇಷ ಪ್ರಾಶಸ್ತ್ಯ ಕೊಟ್ಟಿರುವುದಕ್ಕೆಯೇ ಈ ಘಟನೆ ನಡೆದಿತ್ತು ಎನ್ನುವ ಆರೋಪಗಳು ಅಂದು ಕೇಳಿ ಬಂದಿತ್ತು.
ದಸರಾ ಬಳಿಕ ನಡೆದ ದುರಂತ: (ಅ.3, 2014); ಬಿಹಾರದ ಪಾಟ್ನಾದಲ್ಲಿ ದಸರಾ ಆಚರಣೆ ಮುಗಿದ ಬಳಿಕ ಗಾಂಧಿ ಮೈದಾನದಲ್ಲಿ ಸಂಭವಿಸಿದ ಈ ಕಾಲ್ತುಳಿತ ಘಟನೆಯಲ್ಲಿ 32 ಜನರು ಸಾವನ್ನಪ್ಪಿ, 26 ಮಂದಿ ಗಾಯಗೊಂಡಿದ್ದರು.
ನವರಾತ್ರಿ ಸಂಭ್ರಮದಲ್ಲಿ ನಡೆಯಿತು ಘನಘೋರ ಘಟನೆ (ಅ.13,2013):
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್‌ಗಢ ದೇವಸ್ಥಾನದ ಬಳಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಉಂಟಾದ ಈ ಕಾಲ್ತುಳಿತ ಘಟನೆಯಲ್ಲಿ 115 ಮಂದಿ ಸಾವನ್ನಪ್ಪಿದರು. 100 ಮಂದಿ ಗಾಯಗೊಂಡಿದ್ದರು. ಭಕ್ತರು ದಾಟುತ್ತಿದ್ದ ಸೇತುವೆ ಕುಸಿಯುಲಿದೆ ಎನ್ನುವ ವದಂತಿ ಎಲ್ಲೆಡೆ ಹಬ್ಬಿತು. ಈ ಭೀತಿಯಿಂದಲೇ ಈ ಕಾಲ್ತುಳಿತ ನಡೆದಿತ್ತು.
ಅದಾಲತ್ ಘಾಟ್‌ನಲ್ಲಿ ಛತ್ ಪೂಜೆ ವೇಳೆ ಕಾಲ್ತುಳಿತ: (ನ.19, 2012);
ಪಾಟ್ನಾದ ಗಂಗಾ ನದಿಯ ದಡದಲ್ಲಿರುವ ಅದಾಲತ್ ಘಾಟ್‌ನಲ್ಲಿ ಛತ್ ಪೂಜೆಯ ವೇಳೆ ನೂಕುನುಗ್ಗಲು ಉಂಟಾಗಿ, ತಾತ್ಕಾಲಿಕ ಸೇತುವೆಯೊಂದು ಕುಸಿದು ಸುಮಾರು 20 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು.
ಹರಿದ್ವಾರ ಕಾಲ್ತುಳಿತ ಘಟನೆ (ನ.8, 2011): ಹರಿದ್ವಾರದಲ್ಲಿ ಗಂಗಾ ನದಿಯ ದಡದಲ್ಲಿರುವ ಹರ್-ಕಿ-ಪೌರಿ ಘಾಟ್‌ನಲ್ಲಿ ಸಂಭವಿಸಿದ ಈ ಕಾಲ್ತುಳಿತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು.
ಶಬರಿಮಲೆ ಭಕ್ತರಿಗೆ ಜೀಪ್ ಢಿಕ್ಕಿ (ಜ.14,2011): ಕೇರಳದ ಇಡುಕ್ಕಿ ಜಿಲ್ಲೆಯ ಪುಲ್ಮೇಡುವಿನಲ್ಲಿ ವಾಪಾಸ್ ಆಗುತ್ತಿದ್ದ ಶಬರಿಮಲೆ ಯಾತ್ರಾರ್ಥಿಗಳಿಗೆ ಜೀಪ್ ಢಿಕ್ಕಿ ಹೊಡೆದಿತ್ತು. ಇದರಿಂದ ನೂರಾರು ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಆಗಿತ್ತು. ಪರಿಣಾಮ ಕನಿಷ್ಠ 104 ಶಬರಿಮಲೆ ಭಕ್ತರು ಸಾವನ್ನಪ್ಪಿ, ಮತ್ತು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದೇವಮಾನವನ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತ:(ಮಾ.4,2010); ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಕೃಪಾಲು ಮಹಾರಾಜನ ರಾಮ್ ಜಾಂಕಿ ದೇವಸ್ಥಾನದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾರೊಬ್ಬರು ಉಚಿತ ಬಟ್ಟೆ ಮತ್ತು ಆಹಾರವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾಗ ಉಂಟಾದ ಕಾಲ್ತುಳಿತದಲ್ಲಿ ಸುಮಾರು 63 ಜನರು ಸಾವನ್ನಪ್ಪಿದ್ದರು.
ಬಾಂಬ್ ಸ್ಫೋಟದ ವದಂತಿಯಿಂದ ಕಾಲ್ತುಳಿತ (ಸೆ. 30, 2008): ರಾಜಸ್ಥಾನದ ಜೋಧಪುರ ನಗರದಲ್ಲಿ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಭಕ್ತರು ನೆರದಿದ್ದ ವೇಳೆ ಬಾಂಬ್ ಸ್ಫೋಟಗೊಳ್ಳಲಿದೆ ಎನ್ನುವ ವದಂತಿಯ ಮಾತಿನಿಂದ ನೂರಾರು ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ 250 ಮಂದಿ ಪ್ರಾಣ ಕಳೆದುಕೊಂಡಿದ್ದರು. 60ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು.
ಬಂಡೆ ಕುಸಿತ ವದಂತಿ, ನೂರಾರು ಭಕ್ತರು ಸಾವು..(ಆ.3,2008); ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇವಸ್ಥಾನದಲ್ಲಿ ಅಂದು ಸಾವಿರಾರು ಭಕ್ತರು ನೆರೆದಿದ್ದರು. ಭಕ್ತರ ನಡುವೆ ಯಾರೋ ಬಂಡೆ ಕುಸಿತಗೊಳ್ಳಲಿದೆ ಎನ್ನುವ ಮಾತನ್ನು ಹೇಳಿದ್ದರು. ಬಂಡೆ ಕುಸಿತದ ಭೀತಿಯಿಂದ ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಈ ಘಟನೆಯಲ್ಲಿ 162 ಜನರು ಸಾವನ್ನಪ್ಪಿ, 47 ಮಂದಿ ಗಾಯಗೊಂಡಿದ್ದರು.
ಮಹಾರಾಷ್ಟ್ರ ಮಂಧರದೇವಿ ದೇವಸ್ಥಾನದಲ್ಲಿ ಕಾಲ್ತುಳಿತದ ಭೀಕರ ಘಟನೆ(ಜ.25, 2005):
ಮಂಧರದೇವಿ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥಯಾತ್ರೆಯಲ್ಲಿ ಸಂಭವಿಸಿದ ಈ ಕಾಲ್ತುಳಿತ ದೇಶದಲ್ಲಿ ನಡೆದ ಕಾಲ್ತುಳಿತ ಘಟನೆಗಳಲ್ಲಿ ಅತ್ಯಂತ ಘನಘೋರ ಘಟನೆಗಳಲ್ಲಿ ಒಂದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಭಕ್ತಾದಿಗಳು ತೆಂಗಿನಕಾಯಿ ಒಡೆಯುತ್ತಿದ್ದರಿಂದ ಜಾರುತ್ತಿದ್ದ ಮೆಟ್ಟಿಲುಗಳ ಮೇಲೆ ಕೆಲವರು ಬಿದ್ದು ಅವಘಡ ಸಂಭವಿಸಿತು.
ನಾಸಿಕ್ ಕುಂಭಮೇಳದಲ್ಲಿ ಕಾಲ್ತುಳಿತ: (ಆ. 27, 2003): ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕುಂಭಮೇಳದಲ್ಲಿ ಪವಿತ್ರ ಸ್ನಾನದ ವೇಳೆ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದರು ಮತ್ತು ಸುಮಾರು 140 ಜನರು ಗಾಯಗೊಂಡಿದ್ದರು.