ಲಕ್ನೋ : ಚುನಾವಣಾ ಚಿಹ್ನೆ ಸೈಕಲ್‌ಗಾಗಿ ಆಳುವ ಸಮಾಜವಾದಿ ಪಕ್ಷದೊಳಗಿನ ಸಮರ ನಿರತ ಬಣದೊಳಗಿನ ವಿವಾದದ ಬಗ್ಗೆ ಚುನಾವಣಾ ಆಯೋಗ ಇಂದು ನಿರ್ಣಾಯಕ ತೀರ್ಪು ನೀಡಲಿರುವ ನಡುವೆಯೇ, ಪಕ್ಷದ ಸಂಸ್ಥಾಪಕ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಇಂದು ಸೋಮವಾರ, ತನ್ನ ಪುತ್ರ ಅಖೀಲೇಶ್ ಸರಿದಾರಿಗೆ ಬರದೇ ಹೋದಲ್ಲಿ ತಾನು ಆತನ ವಿರುದ್ಧವೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
“ಅಖೀಲೇಶ್ ಮುಸ್ಲಿಮರನ್ನು ಸಮಾಜವಾದಿ ಪಕ್ಷದ ವಿರುದ್ಧ ತಿರುಗಿಸಿದ್ದಾರೆ ಮತ್ತು ಆ ಮೂಲಕ ಆತ ಪಕ್ಷಕ್ಕೆ ಭಾರೀ ದೊಡ್ಡ ಹಾನಿ ಉಂಟುಮಾಡಿದ್ದಾರೆ’ ಎಂದು ಮುಲಾಯಂ ಇಂದು ರಾಜಧಾನಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
“ಪಕ್ಷವನ್ನು ಮತ್ತು ಪಕ್ಷದ ಚುನಾವಣಾ ಚಿಹ್ನೆಯಾಗಿರುವ ಸೈಕಲ್ ಅನ್ನು ಉಳಿಸಲು ನಾನು ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ. ಅಷ್ಟಿದ್ದೂ ಆತ (ಅಖೀಲೇಶ್) ನನ್ನ ಮಾತನ್ನು ಕೇಳಿ ಸರಿದಾರಿಗೆ ಬಾರದೇ ಹೋದಲ್ಲಿ ನಾನೇ ಆತನ ವಿರುದ್ಧ ಚುನಾವಣೆಯಲ್ಲಿ ಹೋರಾಡುವೆ’ ಎಂದು ಮುಲಾಯಂ ಗುಡುಗಿದರು.
“ಅಖೀಲೇಶ್ ವಿರುದ್ಧ ಹೋರಾಡಲು ನಾನು ಜನರ ಬೆಂಬಲವನ್ನು ಕೋರುತ್ತೇನೆ; ಆತ ನಮ್ಮ ಎದುರಾಳಿಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾನೆ’ ಎಂದು ಮುಲಾಯಂ ಆರೋಪಿಸಿದರು.
ಪಕ್ಷದ ಸೈಕಲ್ ಚಿಹ್ನೆಯನ್ನು ನಾನು ಬಿಟ್ಟುಕೊಡುವುದಿಲ್ಲ; ಬೇಕಿದ್ದರೆ ಕೋರ್ಟಿನಲ್ಲಿ ಕೂಡ ನಾನು ಹೋರಾಡಲು ಸಿದ್ಧ ಎಂದು ಮುಲಾಯಂ ಹೇಳಿದರು.
ಈ ನಡುವೆ ಅಪ್ಪ – ಮಗನ ವಿವಾದದಲ್ಲಿ ಕೇಂದ್ರ ಬಿಂದುವಾಗಿರುವ ಪಕ್ಷದ ಪ್ರಧಾನ ಕಾರ್ಯದಶಿರ ಅಮರ್ ಸಿಂಗ್ ಅವರು ಎರಡೂವರೆ ತಿಂಗಳ ಮಟ್ಟಿಗೆ ಲಂಡನ್‌ಗೆ ಹಾರಿರುವುದಾಗಿ ವರದಿಗಳು ತಿಳಿಸಿವೆ.
ಈ ನಡುವೆ ಮುಲಾಯಂ ಅವರು ತನ್ನ ಸಹೋದರ ಶಿವಪಾಲ್ ಯಾದವ್‌ಗೆ ಬದಲಾಗಿ ತನ್ನ ಹಳೇ ಕಾಲದ ನಿಕಟವರ್ತಿ ಮಾಜಿ ಸಂಸದೀಯ ವ್ಯವಹಾರಗಳ ಸಚಿವೆ ಅಂಬಿಕಾ ಚೌಧರಿಯೊಂದಿಗೆ ಚುನಾವಣಾ ಆಯೋಗದ ಕಾರ್ಯಾಲಯಕ್ಕೆ ವಿಚಾರಣೆಗಾಗಿ ತೆರಳಿದ್ದಾರೆ.