ಹೊಸದಿಲ್ಲಿ : ಸಿಕ್ಕಿಂನ ವಿವಾದಿತ ಡೋಕ್‌ಲಾಂ ಗಡಿಯಲ್ಲಿ ಚೀನ ಸೇನೆಯೊಂದಿಗಿನ ಮುಖಾಮುಖೀ ಮುಂದುವರಿದಿರುವಂತೆಯೇ ಭಾರತೀಯ ಸೇನೆ ಇದೀಗ ಭೂತಾನ್ – ಚೀನ ಟ್ರೈ ಜಂಕ್ಷನ್‌ಗೆ ಸಮೀಪವಿರುವ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಆದೇಶಿಸಿದೆ.
ಭೂತಾನ್ – ಚೀನ ಟ್ರೈ ಜಂಕ್ಷನ್‌ಗೆ ನಿಕಟವಾಗಿರುವ ಭಾರತೀಯ ಗಡಿ ಗ್ರಾಮ ನಥಾಂಗ್‌ನ ಜನರಿಗೆ ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುವಂತೆ ಭಾರತೀಯ ಸೇನೆ ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ವಿವಾದಿತ ಹಾಗೂ ಉದ್ವಿಗ್ನತೆಗೆ ಕಾರಣವಾಗಿರುವ ಡೋಕ್‌ಲಾಂ ಗಡಿಯಿದ ಕೇವಲ 35 ಕಿ.ಮೀ. ಒಳಭಾಗದಲ್ಲಿ ನಥಾಂಗ್ ಭಾರತೀಯ ಗಡಿ ಗ್ರಾಮವಿದೆ.
ಸುಕ್‌ನಾದಿಂದ ಡೋಕ್‌ಲಾಮ್ ಕಡೆಗೆ ಸಾಗಬೇಕೆಂದು ಆದೇಶಿಸಲ್ಪಟ್ಟಿರುವ 33ನೇ ಸೇನಾ ತುಕಡಿಗೆ ಸೇರಿರುವ ಸಹಸ್ರಾರು ಭಾರತೀಯ ಸೈನಿಕರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ನಥಾಂಗ್ ಗ್ರಾಮಸ್ಥರಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸಲಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಚೀನ ಸೇನೆ ಒಂದೊಮ್ಮೆ ಸಣ್ಣ ಮಟ್ಟಿನ ಮಿಲಿಟರಿ ಕಾರ್ಯಾಚರಣೆ ಕೈಗೊಂಡಲ್ಲಿ ಭಾರತೀಯ ಪೌರರಲ್ಲಿ ಸಾವು ನೋವು ಸಂಭವಿಸುವುದನ್ನು ತಪ್ಪಿಸಲು ನಥಾಂಗ್ ಗ್ರಾಮಸ್ಥರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ ಎಂದು ತಿಳಿಯಲಾಗಿದೆ.
ಭಾರತದ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವುದಕ್ಕೆ ಕೌಂಟ್ ಡೌನ್ (ಕ್ಷಣಗಣನೆ) ಆರಂಭವಾಗಿದೆ ಎಂದು ಆ.9ರಂದು ಚೀನದ ಸರಕಾರಿ ಒಡೆತನದ ದೈನಿಕ ವರದಿ ಮಾಡಿತ್ತು.
ಈ ನಡುವೆ ಸಿಕ್ಕಿಂನ ವಿವಾದಿತ ಡೋಕ್‌ಲಾಂ ಗಡಿಯಲ್ಲಿ ಚೀನ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿರುವುದಾಗಿ ವರದಿಯಾಗಿದೆ.
ಭಾರತ – ಚೀನ ನಡುವಿನ ಡೋಕ್‌ಲಾಂ ಗಡಿ ವಿವಾದ ಇದೀಗ ಏಳನೇ ವಾರವನ್ನು ಪ್ರವೇಶಿಸಿದೆ.