ಹೊಸದಿಲ್ಲಿ : ಸಿಕ್ಕಿಂ ಗಡಿಯ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನಾ ಮುಖಾಮುಖೀ ಕಳೆದ ಎರಡು ತಿಂಗಳಿಂದ ಸಾಗಿದ್ದು ಸಮರ ಬೆದರಿಕೆ ಎದುರಾಗಿರುವ ನಡುವೆಯೇ ಭಾರತದ ಸೇನಾ ಉಪ ಮುಖ್ಯಸ್ಥ ಶರತ್ ಚಂದ್ ಅವರು “ಮುಂಬರುವ ವರ್ಷಗಳಲ್ಲಿ ಚೀನ ಭಾರತಕ್ಕೆ ದೊಡ್ಡ ಬೆದರಿಕೆಯಾಗಲಿದೆ’ ಎಂದು ಹೇಳಿದ್ದಾರೆ.
ಸೇನೆಯ ಮಾಸ್ಟರ್ ಜನರಲ್ ಆರ್ಡ್‌ನೆನ್ಸ್ ಆ್ಯಂಡ್ ಕಾನ್‌ಫೆಡರೇಶನ್ ಆಪ್ ಇಂಡಿಯನ್ ಇಂಡಸ್ಟ್ರಿ ಏರ್ಪಡಿಸಿದ ಜಂಟಿ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಸೇನಾ ಉಪ ಮುಖ್ಯಸ್ಥ ಶರತ್ ಚಂದ್ ಅವರು ಎಲ್‌ಓಸಿಯಲ್ಲಿನ ಭಾರತೀಯ ಶಾಲೆಯನ್ನು ಗುರಿ ಇರಿಸಿಕೊಂಡು ಪಾಕ್ ಸೇನೆ ಶೆಲ್ ದಾಳಿ ನಡೆಸುತ್ತಿರುವುದು ಅತ್ಯಂತ ಹೇಯ ಹಾಗೂ ಹೇಡಿತನದ ಕೃತ್ಯ ಎಂದು ಹೇಳಿದರು.
ಶರತ್ ಚಂದ್ ಮುಂದುವರಿದು ಹೀಗೆ ಹೇಳಿದರು :
ನಮ್ಮ ಉತ್ತರ ದಿಕ್ಕಿನಲ್ಲಿ ಚೀನ ಇದೆ; ಅದರ ಭೂಭಾಗ ಅತ್ಯಂತ ದೊಡ್ಡದಿದೆ. ಅದರ ಸಂಪನ್ಮೂಲಗಳು ಅತ್ಯಪಾರ ಇವೆ; ಅದರ ಸೇನೆ ಕೂಡ ಬೃಹತ್ ಗಾತ್ರದಲ್ಲಿದೆ.
ನಮ್ಮ ಮತ್ತು ಅವರ ನಡುವೆ ಹಿಮಾಲಯ ಪರ್ವತ ಇದ್ದರೂ ಚೀನ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಬಲು ದೊಡ್ಡ ಬೆದರಿಕೆಯಾಗಲಿದೆ. ಸೈನ್ನೀಕರಣದಲ್ಲಿ ಚೀನ ಈಗ ಅಮೆರಿಕದ ಜತೆಗೆ ಸ್ಪರ್ಧೆ ನಡೆಸುವಷ್ಟು ಮುಂದಕ್ಕೆ ಸಾಗಿದೆ. ಮಾತ್ರವಲ್ಲದೆ ಚೀನ ವಿಶ್ವದ ಎರಡನೇ ಬೃಹತ್ ಆರ್ಥಿಕ ಶಕ್ತಿಯಾಗಿದೆ; ಬೇಗನೆ ಅದು ಅಮೆರಿಕವನ್ನು ಹಿಂದಿಕ್ಕಲಿದೆ.