ಹೊಸದಿಲ್ಲಿ : “ನನ್ನ ಸರಕಾರ ಡಾ. ಬಿ ಆರ್ ಅಂಬೇಡ್ಕರ್‌ಗೆ ನೀಡಿದಷ್ಟು ಗೌರವ ಮತ್ತು ಮಹತ್ವವನ್ನು ಬೇರೆ ಯಾವ ಸರಕಾರವೂ ಈ ತನಕ ನೀಡಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮೂಹಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇಂದಿಲ್ಲಿ ಹೇಳಿದರು. ಕಾಂಗ್ರೆಸ್‌ಗೆ ನೇರ ಟಾಂಗ್ ನೀಡಿದ ಪ್ರಧಾನಿ ಮೋದಿ “ಅಂಬೇಡ್ಕರ್ ಅವರನ್ನು ರಾಜಕೀಯಕ್ಕೆ ಎಳೆದು ತರಬೇಡಿ’ ಎಂದು ಹೇಳಿದರು.
“ನಾವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಡಾ. ಅಂಬೇಡ್ಕರ್ ಸಾರಿದ ಮೂಲ ತತ್ವಗಳಲ್ಲಿ ಸಾಮರಸ್ಯ ಮತ್ತು ಏಕತೆ ಮುಖ್ಯವಾಗಿವೆ. ಬಡವರಲ್ಲಿ ಬಡವರಿಗಾಗಿ ಕೆಲಸ ಮಾಡುವುದೇ ನಮ್ಮ ಧ್ಯೇಯವಾಗಿದೆ’ ಎಂದು ಪ್ರಧಾನಿ ಮೋದಿ ಅವರು ಇಲ್ಲಿನ “ವೆಸ್ಟರ್ನ ಕೋರ್ಟ್’ಗೆ ತಾಗಿಕೊಂಡಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಹೇಳಿದರು. ಈ ನೂತನ ವ್ಯವಸ್ಥೆಯು ಹೊಸದಾಗಿ ಚುನಾಯಿತರಾದ ಶಾಸಕರಿಗೆ ತಮ್ಮ ಪ್ರಯಾಣದ ನಡುವಿನ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತದೆ.
ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ದುರ್ಬಲಗೊಳಿಸಿದ ಸವೋಚ್ಚ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಿ ಕಳೆದ ಸೋಮವಾರ ದೇಶದ ವಿವಿಧ ರಾಜ್ಯಗಳಲ್ಲಿ ದಲಿತ ಸಮೂಹಗಳು ನಡೆಸಿದ್ದ ಹಿಂಸಾತ್ಮಕ ಆಂದೋಲನಕ್ಕೆ 10 ಮಂದಿ ಬಲಿಯಾಗಿ 60ಕ್ಕೂ ಅಧಿಕ ಮಂದಿ ಗಾಯಗೊಂಡು ಅಪಾರ ಆಸ್ತಿಪಾಸ್ತಿ ನಷ್ಟವಾಗಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ಹೊಂದಿದ್ದ ಪರಿಕಲ್ಪನೆಯನ್ನು ನನ್ನ ಸರಕಾರ ನನಸುಗೊಳಿಸಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸಂಪೂರ್ಣಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಂಬೇಡ್ಕರ್ ಜನ್ಮ ದಿನದ ಮುನ್ನಾ ದಿನವಾದ ಎ.13ರಂದು, 26, ಆಲಿಪುರ್ ರೋಡ್ ಹೌಸ್ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಲಾಗುವುದು ಎಂದು ಮೋದಿ ಹೇಳಿದರು.