ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ಅಗತ್ಯವಿರುವ ಔಷಧಗಳ ಪೂರೈಕೆ, ಆಕ್ಸಿಜನ್ ಸರಬರಾಜು ಸೇರಿದಂತೆ ರಾಷ್ಟ್ರೀಯ ಯೋಜನೆ ವರದಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಗುರುವಾರ(ಏಪ್ರಿಲ್ 22) ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕು ಪರಿಸ್ಥಿತಿ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ. ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ ನೇತೃತ್ವದ ಪೀಠ, ದೇಶದಲ್ಲಿ ಕೋವಿಡ್ 19 ಲಸಿಕೆಯ ವಿತರಣೆ ಮತ್ತು ನಿರ್ವಹಣೆ ಕುರಿತು ವಿಚಾರಣೆ ವೇಳೆ ಪರಿಗಣಿಸುವುದಾಗಿ ತಿಳಿಸಿದೆ.
ಸಿಜೆಐ ಬೋಬ್ಡೆ, ಜಸ್ಟೀಸ್ ಎಲ್ ಎನ್ ರಾವ್ ಮತ್ತು ಜಸ್ಟೀಸ್ ಎಸ್ ಆರ್ ಭಟ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ, ಸೋಂಕು ಹೆಚ್ಚಳವಾಗುತ್ತಿರುವ ಪರಿಣಾಮ ಲಾಕ್ ಡೌನ್ ಘೋಷಿಸುವ ಅಧಿಕಾರ ಹೈಕೋರ್ಟ್ ಗಳಿಗೆ ಇದೆಯೇ ಎಂಬ ಕುರಿತು ಪರಿಶೀಲಿಸುವುದಾಗಿ ಅಭಿಪ್ರಾಯವ್ಯಕ್ತಪಡಿಸಿದೆ.
ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಶುಕ್ರವಾರ(ಏಪ್ರಿಲ್ 23)ಸುಮೊಟೊ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.
ಒಂದು ಪೀಠವಾಗಿ, ಕೋರ್ಟ್ ಆಗಿ ಇಂತಹ ವಿಚಾರಗಳಲ್ಲಿ ಸುಮೊಟೊ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬಹುದಾಗಿದೆ ಎಂದು ಸುಪ್ರೀಂ ತ್ರಿಸದಸ್ಯ ಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ತಿಳಿಸಿದೆ ಎಂದು ವರದಿ ಹೇಳಿದೆ.