Advertisement

ಮ್ಯಾಡಿಸನ್‌ ಕೀಸ್‌ಗೆ ಸೆಮಿ ಸಂಭ್ರಮ

06:00 AM Jun 06, 2018 | Team Udayavani |

ಪ್ಯಾರಿಸ್‌: ಅಮೆರಿಕದ 13ನೇ ಶ್ರೇಯಾಂಕದ ಮ್ಯಾಡಿಸನ್‌ ಕೀಸ್‌ ಅವರು ಅಮೋಘ ಆಟದ ಪ್ರದರ್ಶನ ನೀಡಿ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ಕಜಾಕ್‌ಸ್ಥಾನದ ವಿಶ್ವದ 98ನೇ ರ್‍ಯಾಂಕಿನ ಯೂಲಿಯಾ ಪುತಿನ್‌ಟೆವಾ ಅವರನ್ನು 7-6 (7-5), 6-4 ಸೆಟ್‌ಗಳಿಂದ ಸೋಲಿಸಿ ಮೊದಲ ಬಾರಿ ಇಲ್ಲಿ ಸೆಮಿಫೈನಲ್‌ ತಲುಪಿದ ಸಂಭ್ರಮ ಆಚರಿಸಿದರು. 

Advertisement

23ರ ಹರೆಯದ ಕೀಸ್‌ ಸೆಮಿಫೈನಲ್‌ನಲ್ಲಿ ತನ್ನ ದೇಶದವರೇ ಆದ ಮತ್ತು ಆತ್ಮೀಯ ಸ್ನೇಹಿತೆ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇವರಿಬ್ಬರು ಕಳೆದ ವರ್ಷದ ಯುಎಸ್‌ ಫೈನಲ್‌ನಲ್ಲಿ ಪರಸ್ಪರ ಮುಖಾಮುಖೀಯಾಗಿದ್ದು ಕೀಸ್‌ ಶರಣಾಗಿದ್ದರು. ಈ ಬಾರಿ ಇಲ್ಲಿ ಮುಖಾಮುಖೀಯಾದರೆ ಕೀಸ್‌ ಸೇಡು ತೀರಿಸಿಕೊಳ್ಳಬಹುದು. ಸ್ಟೀಫ‌ನ್ಸ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ರಶ್ಯದ ದರಿಯಾ ಕಸತ್ಕಿನಾ ಅವರನ್ನು ಎದುರಿಸಲಿದ್ದಾರೆ. ಕೀಸ್‌ ಈ ಕೂಟದಲ್ಲಿ ಇಷ್ಟರವರೆಗೆ ಒಂದೇ ಒಂದು ಸೆಟ್‌ ಕಳೆದುಕೊಂಡಿಲ್ಲ.

ಯೂಲಿಯಾ ಚೆನ್ನಾಗಿ ಆಡುತ್ತಿದ್ದ ಕಾರಣ ನನ್ನ ಆಟದ ಬಗ್ಗೆ ಗಮನ ಹರಿಸುತ್ತಿದ್ದೆ. ಎಚ್ಚರಿಕೆಯಿಂದ ಆಡಿದ್ದರಿಂದ ಗೆಲುವು ಸಾಧ್ಯವಾಯಿತು.
ಮ್ಯಾಡಿಸನ್‌ ಕೀಸ್‌ 

ಸ್ಟೀಫ‌ನ್ಸ್‌  ಸೆಮಿಫೈನಲಿಗೆ
ಪ್ಯಾರಿಸ್‌: ಎಸ್‌ ಓಪನ್‌ ಚಾಂಪಿಯನ್‌ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಅವರು ರಷ್ಯಾದ ದರಿಯಾ ಕಸತ್ಕಿನಾ ಅವರನ್ನು ಸುಲಭವಾಗಿ ಮಣಿಸಿ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದರು. ಸೆಮಿಫೈನಲ್‌ನಲ್ಲಿ ಅವರು ತನ್ನ ದೇಶದವರೇ ಆದ ಮತ್ತು ಸ್ನೇಹಿತೆ ಮ್ಯಾಡಿಸನ್‌ ಕೀಸ್‌ ಅವರನ್ನು ಎದುರಿಸಲಿದ್ದಾರೆ. ವಿಶ್ವದ ಎರಡನೇ ರ್‍ಯಾಂಕಿನ ಕ್ಯಾರೋಲಿನ್‌ ವೋಜ್ನಿಯಾಕಿ ಅವರನ್ನು ಕೆಡಹಿ ಸುದ್ದಿ ಮಾಡಿದ್ದ ಕಸತ್ಕಿನಾ ಅವರನ್ನು 6-3, 6-1 ನೇರ ಸೆಟ್‌ಗಳಿಂದ ಉರುಳಿಸಿದ ಸ್ಟೀಫ‌ನ್ಸ್‌ ಅಂತಿಮ ನಾಲ್ಕರ ಸುತ್ತು ತಲುಪಿದರು.

ಸೆಮಿಫೈನಲ್‌ನಲ್ಲಿ ನನ್ನ ಆತ್ಮೀಯ ಸ್ನೇಹಿತೆಯ ಜತೆ ಆಡುವುದರಿಂದ ರೋಮಾಂಚನ ಗೊಂಡಿದ್ದೇನೆ. ನಾವು ಈಗಾಗಲೇ ಯುಎಸ್‌ ಓಪನ್‌ನ ಫೈನಲ್‌ನಲ್ಲಿ ಪರಸ್ಪರ ಆಡಿದ್ದೇವೆ. ಇದು ಅಮೆರಿಕ ಟೆನಿಸ್‌ ಪಾಲಿಗೆ ಒಳ್ಳೆಯ ವಿಷಯ ಎಂದು ಸ್ಟೀಫ‌ನ್ಸ್‌ ಹೇಳಿದರು. ಬಹಳಷ್ಟು ಗಾಯದ ಸಮಸ್ಯೆಯ ಬಳಿಕ ಸ್ಟೀಫ‌ನ್ಸ್‌ ಕಳೆದ ವರ್ಷ ಯುಎಸ್‌ ಓಪನ್‌ ಗೆಲ್ಲುವ ಮೂಲಕ ತನ್ನ ಮೊದಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಪಡೆದಿದ್ದರು. ಇದೀಗ ಮೂರನೇ ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ.

Advertisement

ಮುಗುರುಜಾ ಮುನ್ನಡೆ
ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಸುಲಭವಾಗಿ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಅವರ ಎದುರಾಳಿ ಉಕ್ರೈನಿನ ಲೆಸಿಯಾ ಸುರೆಂಕೊ ಅವರು 2 ಗೇಮ್‌ ಆಡಿದ ಬಳಿಕ ಗಾಯಾಳಾಗಿ ನಿವೃತ್ತಿಯಾಗಿದ್ದರಿಂದ ಮುಗುರುಜಾ ಮುನ್ನಡೆ ಸಾಧಿಸಿದರು.

ಪ್ಯಾರಿಸ್‌ನಲ್ಲಿ ಎರಡನೇ ಪ್ರಶಸ್ತಿಗಾಗಿ ಗುರಿ ಇಟ್ಟಿರುವ ಮೂರನೇ ಶ್ರೇಯಾಂಕದ ಮುಗು ರುಜಾ 2-0 ಮುನ್ನಡೆ ಸಾಧಿಸಿದ ವೇಳೆ ಎದುರಾಳಿ ಸುರೆಂಕೊ ಗಾಯದ ಸಮಸ್ಯೆಯಿಂದ ಪಂದ್ಯ ತ್ಯಜಿಸಿದರು. 39ನೇ ರ್‍ಯಾಂಕಿನ ಸುರೆಂಕೊ ಅವರು ಮುಗುರುಜಾ ಅವರ ಹೊಡೆತಕ್ಕೆ ಪ್ರಯತ್ನಿಸುವ ವೇಳೆ ತೊಡೆಯ ನೋವಿಗೆ ಒಳಗಾದರು. ತತ್‌ಕ್ಷಣ ಫಿಸಿಯೋ ಬಂದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಗಾಯ ಉಲ್ಬಣಿಸಿದ್ದರಿಂದ ಸುರೆಂಕೊ ಪಂದ್ಯ  ತ್ಯಜಿಸಿದರು. 

ಈ ಕೂಟದಲ್ಲಿ ಯಾವುದೇ ಸೆಟ್‌ ಕಳೆದುಕೊಳ್ಳದ ಮುಗುರುಜಾ ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್‌ ಮರಿಯಾ ಶರಪೋವಾ ಅವರನ್ನು ಎದುರಿಸಲಿದ್ದಾರೆ. ಶರಪೋವಾ ಇನ್ನೊಂದು ಪಂದ್ಯದಲ್ಲಿ ಆಡದೇ ಮುನ್ನಡೆ ಸಾಧಿಸಿದ್ದರು. ಅವರ ಎದುರಾಳಿ ಸೆರೆನಾ ವಿಲಿಯಮ್ಸ್‌ ಗಾಯದ ಸಮಸ್ಯೆಯಿಂದ ಪಂದ್ಯ ತ್ಯಜಿಸಿದ್ದರು.

ಕೆರ್ಬರ್‌ ಎಂಟರ ಸುತ್ತಿಗೆ
ಜರ್ಮನಿಯ ಮಾಜಿ ನಂಬರ್‌ ವನ್‌ ಆ್ಯಂಜೆಲಿಕ್‌ ಕೆರ್ಬರ್‌ ಸುಲಭ ಜಯದೊಂದಿಗೆ ಅಂತಿಮ ಎಂಟರ ಸುತ್ತಿಗೇರಿದ್ದಾರೆ. ನಾಲ್ಕನೇ ಸುತ್ತಿನ ಹೋರಾಟದಲ್ಲಿ ಅವರು ಏಳನೇ ಶ್ರೇಯಾಂಕದ ಕ್ಯಾರೋಲಿನ್‌ ಗಾರ್ಸಿಯಾ ಅವರನ್ನು 6-2, 6-3 ಸೆಟ್‌ಗಳಿಂದ ಉರುಳಿಸಿದರು. ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಕೆರ್ಬರ್‌ ಎದುರಾಳಿ 24ರ ಹರೆಯದ ಗಾರ್ಸಿಯಾಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಿಲ್ಲ.

ಎರಡು ಬಾರಿಯ ಚಾಂಪಿಯನ್‌ ಕೆರ್ಬರ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ವಿಶ್ವದ ನಂಬರ್‌ ವನ್‌ ಸಿಮೋನಾ ಹಾಲೆಪ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಹಾಲೆಪ್‌ ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂನ ಎಲಿಸ್‌ ಮಾರ್ಟಿನ್ಸ್‌ ಅವರನ್ನು 6-2, 6-1 ಸೆಟ್‌ಗಳಿಂದ ಕೆಡಹಿದ್ದರು.

ಗೆಲುವು ಸಾಧಿಸಿರುವುದು ಸಂತೋಷ ನೀಡಿದೆ. ಕಳೆದ ಕೆಲವು ತಿಂಗಳು ಅವರು ನಿಜವಾಗಿಯೂ ಉತ್ತಮವಾಗಿ ಆಡಿದ್ದಾರೆ ಎಂದು ಪಂದ್ಯದ ಬಳಿಕ ಕೆರ್ಬರ್‌ ಹೇಳಿದ್ದಾರೆ. 

ಥೀಮ್‌ ಸೆಮಿಗೆ
ಪ್ಯಾರಿಸ್‌: ಬಹಳಷ್ಟು ಆಯಾಸ ಗೊಂಡಿದ್ದ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಸುಲಭವಾಗಿ ಕೆಡಹಿದ ಡೊಮಿನಿಕ್‌ ಥೀಮ್‌ ಅವರು ಸತತ ಮೂರನೇ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.

ಜರ್ಮನಿಯ ದ್ವಿತೀಯ ಶ್ರೇಯಾಂಕದ ಜ್ವೆರೇವ್‌ ಅವರನ್ನು 6-4, 6-2, 6-1 ಸೆಟ್‌ಗಳಿಂದ ಕೆಡಹಿದ ಥೀಮ್‌ ಅಂತಿಮ ನಾಲ್ಕರ ಸುತ್ತಿಗೇರಿದರು. ಸೆಮಿಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಥೀಮ್‌ ಅವರು 12 ಬಾರಿಯ ಗ್ರ್ಯಾನ್‌ ಸ್ಲಾಮ್‌ ವಿಜೇತ ನೊವಾಕ್‌ ಜೊಕೋವಿಕ್‌ ಅವರನ್ನು ಎದುರಿಸುವ ಸಾಧ್ಯತೆಯಿದೆ.  ಜ್ವೆರೇವ್‌ ಟೆನಿಸ್‌ ಟೂರ್‌ನ ಕಠಿನ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರಿಗಿಂದು ಕಠಿನ ದಿನವಾಗಿದೆ ಎಂದು ಪಂದ್ಯದ ಬಳಿಕ ಥೀಮ್‌ ಹೇಳಿದರು. ಥೀಮ್‌ ಈ ವರ್ಷ ಆವೆ ಅಂಗಣದಲ್ಲಿ ನಡಾಲ್‌ ಅವರನ್ನು ಸೋಲಿಸಿದ ಏಕೈಕ ಆಟಗಾರರಾಗಿದ್ದಾರೆ.

ಜೊಕೋಗೆ ಸೆಮಿ ನಿರೀಕ್ಷೆ
ನೊವಾಕ್‌ ಜೊಕೋವಿಕ್‌ ಮಂಗಳವಾರ ಕ್ವಾರ್ಟರ್‌ಫೈನಲ್‌ ಪಂದ್ಯ ಆಡಲಿದ್ದು ಗೆಲುವಿನ ಉತ್ಸಾಹದಲ್ಲಿದ್ದಾರೆ. ಶ್ರೇಯಾಂಕರಹಿತ ಆಟಗಾರ ಇಟಲಿಯ ಮಾರ್ಕೊ ಸೆಚಿನಾಟೊ ಅವರನ್ನು ಎದುರಿಸಲಿರುವ ಜೊಕೋವಿಕ್‌ 32ನೇ ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಸೆಮಿಫೈನಲ್‌ ತಲುಪುವ ನಿರೀಕ್ಷೆಯಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next