ಅದು ಸೆಪ್ಟೆಂಬರ್ 11, 1893! ಅದುವರೆಗೂ ಎಲ್ಲೆಡೆ ಹುಟ್ಟುವುದು ನಮ್ಮದೇ ಸೂರ್ಯನೆಂದು ಎದೆಯುಬ್ಬಿಸಿ ಬೀಗುತ್ತಿದ್ದ ಪಾಶ್ಚಾತ್ಯ ಸಂಸ್ಕೃತಿಯ ಮೈಚಳಿ ಬಿಡಿಸಿದ ದಿನವದು. ಕಣ್ಣ ಕಾಂತಿಯಲ್ಲೇ ಸೂರ್ಯನ ತೇಜಸ್ಸು ಹೊಂದಿದ್ದ, ಧೀರನಿಲುವಿನ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಇಡೀ ಜಗತ್ತು ಅಂದು ತಲೆಬಾಗಿತ್ತು. ಅಮೆರಿಕದ ಚಿಕಾಕೋ ನೆಲದಲ್ಲಿ ನಿಂತು, ಅವರು ಮಾಡಿದ ಸರ್ವಧರ್ಮ ಸಮ್ಮೇಳನದ ಭಾಷಣ ಐತಿಹಾಸಿಕವಾಗಿ ಋಜು ಬರೆಯಿತು. ಸಮ್ಮೇಳನದಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಖರವಾಗಿ ವಿಚಾರ ಮಂಡಿಸಿ, ಭಾರತೀಯತೆಯನ್ನು ಎತ್ತಿಹಿಡಿದ ದಿನಗಳು ನಮಗೆ ಎಂದಿಗೂ ಹೆಮ್ಮೆ. ವಿವೇಕಾನಂದರ ಮೊದಲ ದಿನದ ಭಾಷಣದ ಪೂರ್ಣಪಾಠ ನಿಮ್ಮ ಓದಿಗಾಗಿ…
ಅಮೆರಿಕದ ನನ್ನ ಸೋದರ ಸೋದರಿಯರೇ,
ನೀವು ನಮ್ಮನ್ನು ಬರಮಾಡಿಕೊಂಡ ಪರಿ ಮತ್ತು ನಿಮ್ಮ ಆದರಾತಿಥ್ಯದಿಂದ ನಮ್ಮ ಹೃದಯ ತುಂಬಿ ಬಂದಿದೆ. ನಿಮ್ಮ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ, ಮೂಕನಾಗಿದ್ದೇನೆ. ಪ್ರಪಂಚದ ಪುರಾತನ ಧರ್ಮದ ಪರವಾಗಿ ನಿಮಗೆ ನನ್ನ ಧನ್ಯವಾದ ಸಮರ್ಪಣೆ. ಕೋಟ್ಯಂತರ ಹಿಂದೂಗಳ ಪರವಾಗಿ ನಿಮಗೆ ಧನ್ಯವಾದವನ್ನು ಸಮರ್ಪಿಸುತ್ತೇನೆ. ಈ ವೇದಿಕೆಯಲ್ಲಿ, ಬಹುದೂರದಿಂದ ಬಂದವರು, ನಾನಾ ಪ್ರದೇಶಗಳಿಗೆ ಸೇರಿದವರು ಒಟ್ಟಾಗಿದ್ದೀರಿ, ಸಹಿಷ್ಣುತೆ ಕುರಿತು ಮಾತಾಡುತ್ತಿದ್ದೀರಿ. ಇಡೀ ಪ್ರಪಂಚಕ್ಕೇ ಸಹಿಷ್ಣುತೆಯನ್ನು ಕಲಿಸಿದ ಧರ್ಮಕ್ಕೆ ಸೇರಿದವನೆಂಬ ಹೆಮ್ಮೆ ನನಗಿದೆ.
ನಾವು ಸಹಿಷ್ಣುತೆಯಲ್ಲಿ ನಂಬಿಕೆಯಿಡುವುದರ ಜೊತೆಗೆ, ಪ್ರಪಂಚದ ಎಲ್ಲಾ ಧರ್ಮಗಳೂ ನಿಜವೆನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಪ್ರಪಂಚದ ಯಾವುದೇ ಧರ್ಮದ ನಿರಾಶ್ರಿತರಿಗೆ ಜಾಗ ಮಾಡಿಕೊಡುವ ದೇಶದಿಂದ ಬಂದವನೆಂಬ ಹೆಮ್ಮೆ ನನಗಿದೆ. ಇನ್ನೊಂದು ವಿಚಾರವನ್ನು ಹೆಮ್ಮೆಯಿಂದ ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ರೋಮನ್ ದಬ್ಟಾಳಿಕೆಯಿಂದ ತಮ್ಮ ಪವಿತ್ರ ಮಂದಿರವನ್ನು ಕಳೆದುಕೊಂಡ ಇಸ್ರೇಲಿಗರಿಗೂ ನಾವು ದಕ್ಷಿಣಭಾರತದಲ್ಲಿ ಜಾಗ ನೀಡಿದ್ದೇವೆ. ಝೋರಾಸ್ಟ್ರಿಯನ್ ದೇಶದಿಂದ ಬಂದವರಿಗೆ (ಪಾರ್ಸಿ) ಆಶ್ರಯ ನೀಡುತ್ತಿರುವ ದೇಶದಿಂದ ಬಂದವನೆಂಬ ಹೆಮ್ಮೆ ನನಗಿದೆ. ಸೋದರರೇ ನಾನು ಚಿಕ್ಕಂದಿನಿಂದಲೂ ಓದಿಕೊಂಡು ಬಂದಿರುವ, ಲಕ್ಷಾಂತರ ಮಂದಿ ದಿನವೂ ಪಠಿಸುವ ಶ್ಲೋಕವೊಂದರ ಸಾಲುಗಳನ್ನು ನಿಮಗೆ ಓದಿ ಹೇಳಲು ಇಚ್ಚಿಸುತ್ತೇನೆ- “ತೊರೆಗಳು ಶುರುವಿನಿಂದ ಕಡೆಯವರೆಗೂ ಗೊತ್ತು ಗುರಿಯಿಲ್ಲದ ಗಮ್ಯವನ್ನು ಸೇರಲು ತವಕಿಸುತ್ತವೆ, ಮನುಷ್ಯನಂತೆ. ಅವುಗಳ ಮೂಲಗಳು ಬೇರೆ ಬೇರೆಯಿದ್ದರೂ, ಓರೆಯಾಗಿ ಅಥವಾ ನೇರವಾಗಿ ಹರಿದರೂ ಅಂತಿಮವಾಗಿ ಸೇರುವುದು ನಿಮ್ಮನ್ನೇ’.
ಈ ಹೊತ್ತಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವೇ ಭಗವದ್ಗೀತೆಯ ಸಾಲುಗಳಿಗೆ ದ್ಯೋತಕದಂತಿದೆ- “ನನ್ನನ್ನರಸಿ ಯಾರೇ ಬಂದರೂ, ಯಾವ ರೂಪದಲ್ಲೇ ಬಂದರೂ ಅವನನ್ನು ನಾನು ತಲುಪುತ್ತೇನೆ. ಮನುಷ್ಯರೆಲ್ಲರೂ ತಮಗೆ ಬೇಕಾದ ಹಾದಿಯಲ್ಲಿ ಕಷ್ಟಕರ ಬದುಕನ್ನು ಸವೆಸುತ್ತಿದ್ದಾರೆ. ಆ ಹಾದಿಗಳೆಲ್ಲವೂ ಕೊನೆಗೊಳ್ಳುವುದು ನನ್ನಲ್ಲಿಯೇ’. ಸ್ವಧರ್ಮವನ್ನು ಕುರಿತ ಅಂಧ ಭಕ್ತಿ, ಅಸಹಿಷ್ಣುತೆ ಇಂದು ನಮ್ಮ ಸುಂದರ ಭೂಮಿಯನ್ನು ಆವರಿಸಿದೆ.
ಇವೆಲ್ಲವೂ ಕೌರ್ಯ, ಹಿಂಸೆಯ ಮನಃಸ್ಥಿತಿಯನ್ನು ಸೃಷ್ಟಿಸಿವೆ. ರಕ್ತದ ಕೋಡಿ ಹರಿಸಿವೆ; ನಾಗರಿಕತೆಗಳನ್ನು ನಾಶಗೊಳಿಸಿವೆ; ದೇಶಗಳನ್ನು ಅತಂತ್ರವಾಗಿಸಿವೆ. ಇವಿಲ್ಲದೇ ಹೋಗಿರುತ್ತಿದ್ದರೆ ಮನುಷ್ಯ ಜನಾಂಗ ತುಂಬಾ ಮುಂದುವರಿಯುತ್ತಿದ್ದಿತು, ಭೂಮಿಯ ಮೇಲೆ ಹೆಚ್ಚಿನ ಸುಧಾರಣೆಯನ್ನು ಕಾಣಬಹುದಿತ್ತು. ಅಸಹಿಷ್ಣುತೆ, ಹಿಂಸಾಪ್ರವೃತ್ತಿಗೆ ಮಂಗಳ ಹಾಡುವ ಸಮಯ ಬಂದಿದೆ. ಬೆಳಗ್ಗೆ ಈ ಸರ್ವಧರ್ಮ ಸಮ್ಮೇಳನ ಪ್ರಾರಂಭಗೊಂಡಿದ್ದನ್ನು ಸೂಚಿಸುವ ಸಲುವಾಗಿ ಬಡಿದ ಗಂಟೆ ಇದೆಯಲ್ಲ; ಅದು ವಿನಾಶಕ ಶಕ್ತಿಗಳಿಗೆ, ವಿದ್ರೋಹಿ ಮನಸ್ಸುಗಳಿಗೆ ಎಚ್ಚರಿಕೆಯ ಕರೆಗಂಟೆ. ಅದೀಗ ಮೊಳಗಿದೆ.