Advertisement

ಅಮೆರಿಕ ತಂಡಕ್ಕೆ 5 ವಿಕೆಟ್‌ ಜಯ

07:45 AM Sep 14, 2017 | |

ಟೊರಂಟೊ: ರಾಯ್‌ ಸಿಲ್ವ ಅವರ ಸರ್ವಾಂಗೀಣ ಆಟದ ನೆರವಿನಿಂದ ಅಮೆರಿಕ ತಂಡವು ಆಟಿ ಕಪ್‌ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಕೆನಡ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನಿಂದ ಅಮೆರಿಕ ತಂಡಕ್ಕೆ 1991ರ ಬಳಿಕ ಮೊದಲ ಬಾರಿ ಆಟಿ ಕಪ್‌ ಮರಳಿ ಪಡೆಯಲು ಇನ್ನೊಂದು ಗೆಲುವು ಬೇಕಾಗಿದೆ.

Advertisement

ಇಲ್ಲಿನ ಮಾಪ್ಲೆ ಲೀಫ್ ಸಿಸಿ ಮೈದಾನದಲ್ಲಿ ನಡೆದ ಮೂರು ಪಂದ್ಯಗಳ ಆಟಿ ಕಪ್‌ ಸರಣಿಯ ಮೊದಲ ಪಂದ್ಯದಲ್ಲಿ ಕೆನಡ ತಂಡವು ಅಮೆರಿಕದ ನಿಖರ ದಾಳಿಗೆ ತತ್ತರಿಸಿ 40.3 ಓವರ್‌ಗಳಲ್ಲಿ 141 ರನ್ನಿಗೆ ಆಲೌಟಾಯಿತು. ನೂತನ ನಾಯಕ ಹೈದರಾಬಾದ್‌ ಮೂಲದ ಇಬ್ರಾಹಿಂ ಖಲೀಲ್‌ ಅವರ ಮಾರ್ಗದರ್ಶನದಲ್ಲಿ ಅಮೆರಿಕ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿತು. ಅಮೆರಿಕ ಪರ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ರಾಯ್‌ ಸಿಲ್ವ 32 ರನ್ನಿಗೆ 4 ವಿಕೆಟ್‌ ಕಿತ್ತು ಕೆನಡ ತಂಡಕ್ಕೆ ಪ್ರಬಲ ಹೊಡೆತ ನೀಡಿದರು.

ಎಲ್ಮೋರ್‌ ಹಚಿನ್ಸನ್‌ ಕೆನಡದ ಅಗ್ರ ಕ್ರಮಾಂಕದ ಮೂವರ ವಿಕೆಟನ್ನು ಉರುಳಿಸಿದರು. ಈ ಮೂರು ವಿಕೆಟ್‌ ಉರುಳಲು ವಿಕೆಟ್‌ಕೀಪರ್‌ ಖಲೀಲ್‌ ಕಾರಣರಾದರು. ಅವರಲ್ಲಿ ನಾಯಕ ನಿತೀಶ್‌ ಕುಮಾರ್‌ ಕೂಡ ಸೇರಿದ್ದರು. ಇದರಿಂದಾಗಿ ಕೆನಡ 12 ಓವರ್‌ ಮುಗಿದಾಗ 49 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು.

ಮಧ್ಯಮ ಕ್ರಮಾಂಕದ ಬ್ಯಾಟಿಂಗಿಗೆ ರಾಯ್‌ ಸಿಲ್ವ ಪ್ರಬಲ ಹೊಡೆತ ನೀಡಿದ್ದರಿಂದ ಕೆನಡ ಮತ್ತೆ ಕುಸಿಯತೊಡಗಿ 141 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ರಾಯ್‌ ಸಿಲ್ವ ಅವರ ಅಜೇಯ 38 ಮತ್ತು ಅಬ್ದುಲ್ಲ ಅವರ 32 ರನ್‌ ನೆರವಿನಿಂದ ಅಮೆರಿಕ 5 ವಿಕೆಟಿಗೆ 144 ರನ್‌  ಪೇರಿಸಿ ಜಯ ಸಾಧಿಸಿತು. ಬೌಲಿಂಗ್‌ನಲ್ಲಿ 4 ವಿಕೆಟ್‌ ಮತ್ತು ಬ್ಯಾಟಿಂಗ್‌ನಲ್ಲಿ ಅಜೇಯ 38 ರನ್‌ ಹೊಡೆದ ರಾಯ್‌ ಸಿಲ್ವ ಅಮೆರಿಕ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next