Advertisement

USA: ಶಟ್‌ಡೌನ್‌ನತ್ತ ಅಮೆರಿಕ…

08:03 PM Sep 30, 2023 | Team Udayavani |

ಅಮೆರಿಕ ಮತ್ತೆ “ಶಟ್‌ಡೌನ್‌” ಭೀತಿಯಲ್ಲಿದೆ. ಹಣಕಾಸು ಮಸೂದೆ ವಿಚಾರದಲ್ಲಿ ಆಡಳಿತಾರೂಢ ಡೆಮಾಕ್ರಾಟ್‌ ಮತ್ತು ಪ್ರತಿಪಕ್ಷ ರಿಪಬ್ಲಿಕನ್‌ ನಡುವೆ ಉಂಟಾಗಿರುವ ಬಿಕ್ಕಟ್ಟು ಈಗ ಅಮೆರಿಕದ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸುವ ಮಟ್ಟಕ್ಕೆ ತಲುಪಿದೆ. ಮಸೂದೆಗೆ ಸಹಿ ಬೀಳದಿದ್ದರೆ ಅ.1ರಿಂದಲೇ ದೊಡ್ಡಣ್ಣ ಮೌನವಾಗಲಿದ್ದಾನೆ.

Advertisement

ಏನಿದು ಶಟ್‌ಡೌನ್‌?
ಅ.1ರಿಂದ ಅಮೆರಿಕದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಸೆ.30ರೊಳಗಾಗಿ ಸರ್ಕಾರವು ರಾಷ್ಟ್ರೀಯ ಮುಂಗಡ ಪತ್ರಕ್ಕೆ, ಹಣಕಾಸು ಮಸೂದೆಗಳಿಗೆ ಅಂಗೀಕಾರ ಪಡೆಯಬೇಕು. ಈಗ 12 ಮಸೂದೆಗಳು ಅಂಗೀಕಾರಕ್ಕೆ ಬಾಕಿಯಿದ್ದು, ಸರ್ಕಾರವು ಭಾರೀ ಪ್ರಮಾಣದಲ್ಲಿ ವೆಚ್ಚ ಕಡಿತ ಮಾಡದೇ ಇದ್ದರೆ ಈ ಮಸೂದೆಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ರಿಪಬ್ಲಿಕನ್‌ ಪಕ್ಷದ ಸಂಸದರು ಪಟ್ಟುಹಿಡಿದಿದ್ದಾರೆ. ಅ.1ರೊಳಗೆ ಮಸೂದೆಗಳಿಗೆ ಅಧ್ಯಕ್ಷ ಜೋ ಬೈಡೆನ್‌ ಅವರ ಸಹಿ ಬೀಳದೇ ಇದ್ದರೆ, ಅಮೆರಿಕದ ಆಡಳಿತ ಯಂತ್ರವೇ ಸ್ತಬ್ಧವಾಗಲಿದೆ.

ಏನೇನಾಗುತ್ತದೆ?
– ಹಣಕಾಸು ಮಸೂದೆ ಅಂಗೀಕಾರಗೊಳ್ಳದಿದ್ದರೆ ಭಾನುವಾರದಿಂದಲೇ ಸೈನಿಕರು ಸೇರಿದಂತೆ ಸಾವಿರಾರು ಸರ್ಕಾರಿ ಉದ್ಯೋಗಿಗಳು ವೇತನರಹಿತ ರಜೆಯಲ್ಲಿ ತೆರಳಬೇಕಾಗುತ್ತದೆ.
– ಷೇರು ಮತ್ತು ವಿನಿಮಯ ಆಯೋಗವು ತನ್ನೆಲ್ಲ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಿವೆ. ನ್ಯಾಷನಲ್‌ ಪಾರ್ಕ್‌ ಸೇವೆಗಳು ಸ್ಥಗಿತಗೊಳ್ಳಲಿವೆ.
– ಸಾರಿಗೆ ವಲಯವು ದಿನಕ್ಕೆ 140 ದಶಲಕ್ಷ ಡಾಲರ್‌ ನಷ್ಟ ಅನುಭವಿಸಲಿದೆ.
– ಪಾಸ್‌ಪೋರ್ಟ್‌, ಶಸ್ತ್ರಾಸ್ತ್ರ ಲೈಸೆನ್ಸ್‌ ಸೇರಿದಂತೆ ಸರ್ಕಾರಿ ಸೇವೆಗಳಿಂದ ಜನ ವಂಚಿತರಾಗುತ್ತಾರೆ.
– ಹಣಕಾಸು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಲಿದೆ. ಪ್ರತಿ ವಾರವೂ ಆರ್ಥಿಕ ಪ್ರಗತಿ ಶೇ.0.2ರಷ್ಟು ಕುಸಿಯಲಿದೆ.

ಶಟ್‌ಡೌನ್‌ ಎಷ್ಟು ಸಮಯ?
ಬಜೆಟ್‌ಗೆ ಅನುಮೋದನೆ ದೊರೆಯದಿದ್ದರೆ ಅ.1ರಿಂದ ಅಮೆರಿಕ ಶಟ್‌ಡೌನ್‌ ಆಗುವುದು ಖಚಿತ. ಆದರೆ, ಇದು ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ದೀರ್ಘಾವಧಿ ಶಟ್‌ಡೌನ್‌ ಮುಂದುವರಿದರೆ, ಇಡೀ ದೇಶ ಆರ್ಥಿಕ ಹಿಂಜರಿತಕ್ಕೆ ತುತ್ತಾಗಲಿದೆ. ಅದಕ್ಕೂ ಮುನ್ನವೇ ಸರ್ಕಾರವು ಪ್ರತಿಪಕ್ಷಗಳ ಸದಸ್ಯರ ಮನವೊಲಿಸಿ ಬಜೆಟ್‌ಗೆ ಅಂಗೀಕಾರ ಪಡೆದರೆ ಸಮಸ್ಯೆ ಪರಿಹಾರ ಸಾಧ್ಯ.

ಇದೇ ಮೊದಲಲ್ಲ
1976ರಿಂದ ಈವರೆಗೆ ಒಟ್ಟು 22 ಬಾರಿ ಇಂಥ ಪರಿಸ್ಥಿತಿ ಅಮೆರಿಕಕ್ಕೆ ಎದುರಾಗಿದೆ. ಈ ಪೈಕಿ 10 ಬಾರಿ ತೀವ್ರ ಸಮಸ್ಯೆ ಉಂಟಾಗಿ, ಸರ್ಕಾರಿ ನೌಕರರು ವೇತನವಿಲ್ಲದೇ ಮನೆಗಳಲ್ಲಿ ಕುಳಿತುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿತ್ತು. ದೀರ್ಘಾವಧಿಯ ಶಟ್‌ಡೌನ್‌ ಆಗಿದ್ದು 2018 ಮತ್ತು 2019ರಲ್ಲಿ. ಆಗ ಅಧ್ಯಕ್ಷರಾಗಿದ್ದ ಟ್ರಂಪ್‌ ಅವರು ಗಡಿ ಗೋಡೆ ನಿರ್ಮಿಸಲು ಮುಂದಾಗಿದ್ದೇ ರಿಪಬ್ಲಿಕನ್‌ ಮತ್ತು ಡೆಮಾಕ್ರಾಟ್‌ ನಡುವಿನ ಕಿತ್ತಾಟ ತೀವ್ರಗೊಂಡು, ಬಜೆಟ್‌ಗೆ ಅನುಮೋದನೆ ವಿಳಂಬವಾಗಲು ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next