Advertisement

ಕಲಘಟಗಿ ಬಣ್ಣದ ತೊಟ್ಟಿಲಿಗೆ ಅಮೆರಿಕ ಭಾಗ್ಯ

06:15 AM Nov 19, 2018 | Team Udayavani |

ಧಾರವಾಡ: “ಅಪ್ಪಾ ಅದಾವ ಕೈಗಳಿಂದ ಇಂತಹ ಸುಂದರವಾದ ತೊಟ್ಟಿಲು ಮಾಡಿದ್ದಾನೆ ಆತ. ಅವರ ಕೈಗಳು ನಿಜಕ್ಕೂ ದೇವರು ಕೊಟ್ಟ ವರದಾನ. ಅವರಿಗೆ ನನ್ನದೊಂದು ಧನ್ಯವಾದ’.

Advertisement

-ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಾಡುವ ಬಣ್ಣದ ಮತ್ತು ಚಿತ್ತಾರದ ತೊಟ್ಟಿಲನ್ನು ನೋಡಿ ಹೇಳಿದ ಮಾತಿದು.

20 ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಸೇವೆಯಲ್ಲಿದ್ದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಕಲಘಟಗಿಯ ಸಿದ್ದಪ್ಪ ಚಿತ್ರಗಾರ ಅವರು ಮಾಡಿದ್ದ ಸುಂದರ ತೊಟ್ಟಿಲನ್ನು ಡಾ.ರಾಜ್‌  ಕುಟುಂಬಕ್ಕೆ ಕಾಣಿಕೆಯಾಗಿ ಕೊಟ್ಟಾಗ ಅವರು ತೊಟ್ಟಿಲನ್ನು ನೋಡಿ ಅದರಲ್ಲಿ ತಮ್ಮ ಮೊಮ್ಮಕ್ಕಳನ್ನು ಕೂಡಿಸಿ ತೂಗಿ ಆನಂದ ಪಟ್ಟಿದ್ದರು.

ಇದೀಗ ಮತ್ತೆ ಕಲಘಟಗಿಯ ತೊಟ್ಟಿಲು ಡಾ.ರಾಜಕುಮಾರ್‌ ಅವರ ಸಂಬಂಧಿಗಳ ಮನೆಗೆ ಹೋಗುತ್ತಿದೆ. ಪಾರ್ವತಮ್ಮ ರಾಜ್‌ಕುಮಾರ್‌ ಅವರ ತಂಗಿಯ ಮೊಮ್ಮಗಳ ನಾಮಕರಣ ನ.25ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಅಲ್ಲಿಗೆ ಈ ತೊಟ್ಟಿಲು ತಲುಪಿಯಾಗಿದೆ. ಅಲ್ಲಿಂದ ಅಮೆರಿಕಾಕ್ಕೆ ಪಯಣ ಬೆಳೆಸಲಿದೆ. ನ.15ರಂದೇ ಈ ತೊಟ್ಟಿಲನ್ನು ಬೆಂಗಳೂರಿನಿಂದ ಬಂದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ.

ಕೊನೆಯ ಕೊಂಡಿ: ಕಲಘಟಗಿ ತೊಟ್ಟಿಲಿಗೆ ಸಾಮಾನ್ಯವಾಗಿ ರಾಜ್ಯ, ಹೊರರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಂಗಳೂರು, ಮಂಗಳೂರು, ಮುಂಬೈ, ಪುಣೆ, ಸಾಂಗ್ಲಿ, ಮೀರಜ್‌, ಕೊಲ್ಹಾಪೂರ, ಸೊಲ್ಲಾಪೂರಕ್ಕೆ ಪ್ರತಿವರ್ಷ ಇಲ್ಲಿಂದ ತೊಟ್ಟಿಲುಗಳು ಹೋಗುತ್ತವೆ. ಆರಂಭದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ತೊಟ್ಟಿಲು ತಯಾರಿಕೆಯಲ್ಲಿ ತೊಡಗಿದ್ದವು. ಆದರೆ ವರ್ಷಗಳು ಕಳೆದಂತೆ ಗಟ್ಟಿ ತೇಗದ ಕಟ್ಟಿಗೆ ಸಿಗುವುದು ವಿರಳವಾಯಿತು. ಅಲ್ಲದೇ ಮಾಡುವ ಕೆಲಸಕ್ಕೆ ತಕ್ಕನಾದ ಆದಾಯ ಪಡೆಯಲಾಗದೆ ಕೆಲವು ಕುಟುಂಬಗಳು ತೊಟ್ಟಿಲು ತಯಾರಿಕೆಯಿಂದ ದೂರ ಸರಿದವು.

Advertisement

2 ದಶಕಗಳಿಂದ ಕಲಘಟಗಿಯ ಚಿತ್ರಗಾರ ಮತ್ತು ಬಡಿಗೇರ ಕುಟುಂಬಸ್ಥರು ಮಾತ್ರ ತೊಟ್ಟಿಲು ನಿರ್ಮಾಣ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಾವು ತಯಾರಿಸಿದ ಸುಂದರ ತೊಟ್ಟಿಲು ಅಮೆರಿಕ ಸೇರುತ್ತಿರುವುದು ಮಾರುತಿ ಬಡಿಗೇರ ಅವರಿಗೆ ಹೆಮ್ಮೆ ಮತ್ತು ಖುಷಿ ತಂದಿದೆ.

ನಾಗವಲ್ಲಿಗೂ ತೊಟ್ಟಿಲು: ಕಲಘಟಗಿಯ ಓಂಕಾರಪ್ಪ ಬಡಿಗೇರ ಅವರ ಮೊಮ್ಮಗ ಮಾರುತಿ ಬಡಿಗೇರ ತಮ್ಮ ಪೂರ್ವಜರ ತೊಟ್ಟಿಲು ನಿರ್ಮಾಣ ಕುಶಲತೆ ರೂಢಿಸಿಕೊಂಡಿದ್ದಾರೆ. ಸದ್ಯಕ್ಕೆ 15 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ವರೆಗಿನ ವಿಭಿನ್ನ ಬಗೆಯ 20ಕ್ಕೂ ಹೆಚ್ಚು ವಿಧದ ತೊಟ್ಟಿಲುಗಳನ್ನು  ನಿರ್ಮಿಸಿ ಅದಕ್ಕೆ ಸುಂದರ ಬಣ್ಣ ಬಳೆಯುತ್ತಿದ್ದಾರೆ. ರಾಜ್‌ ಕುಟುಂಬಕ್ಕೆ 75 ಸಾವಿರ ರೂ.ಗೆ ತೊಟ್ಟಿಲು ಮಾಡಿಕೊಟ್ಟಿದ್ದಾರೆ.

ಅವರ ಕರಕುಶಲತೆಗೆ ಸಾಕ್ಷಿ ಎನ್ನುವಂತೆ ಇದೀಗ ಚಿತ್ರರಂಗದ ಜನರು ಅವರ ಬೆನ್ನು ಬಿದ್ದಿದ್ದಾರೆ. “ನಾಗವಲ್ಲಿ’ ಎನ್ನುವ ತಮಿಳು ಚಿತ್ರ ನಿರ್ಮಾಣವಾಗುತ್ತಿದ್ದು, ನಲ್ಲೂರು ಅರಮನೆಯಲ್ಲಿ ಚಿತ್ರದ ಶೂಟಿಂಗ್‌ಗಾಗಿ ಇದೀಗ ಅರಮನೆಯವರೇ ಕಲಘಟಗಿ ತೊಟ್ಟಿಲು ಮಾಡಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದು ಅತ್ಯಂತ ದೈತ್ಯ ಮತ್ತು ಕಲಾಕುಸುರಿಯಿಂದ ಕೂಡಿದ್ದು, ಅದರ ನಿರ್ಮಾಣ ಸದ್ಯಕ್ಕೆ ಆರಂಭಗೊಂಡಿದೆ. ಅಲ್ಲದೇ ನಾಡಿನ ಕೆಲವು ಹಿರಿಯ ರಾಜಕಾರಣಿಗಳು ಸಹ ಮಾರುತಿ ಅವರ ಬಳಿ ತೊಟ್ಟಿಲಿಗಾಗಿ ಸಾಲುಗಟ್ಟಿದ್ದಾರೆ.

ತಾಳಿಕೆ, ಬಾಳಿಕೆ, ಕುಶಲತೆಯೇ ಪ್ರಧಾನ
ದಾಂಡೇಲಿ ಅರಣ್ಯದಲ್ಲಿ ಬೆಳೆಯುವ ವಿಶ್ವದ ಉತ್ಕೃಷ್ಠ ಮಟ್ಟದ ತೇಗದಿಂದ ಈ ತೊಟ್ಟಿಲುಗಳು ಸಿದ್ಧಗೊಳ್ಳುವುದರಿಂದ ಗಟ್ಟಿಮುಟ್ಟಾಗಿರುತ್ತವೆ. ಇದೇ ಕಾರಣಕ್ಕಾಗಿಯೇ ಕಲಘಟಗಿ ತೊಟ್ಟಿಲಿಗೆ ಹೆಚ್ಚಿನ ಬೇಡಿಕೆ. ಅಲ್ಲದೇ ಅವುಗಳ ಮೇಲೆ ವಿಭಿನ್ನ ಬಗೆಯ ಚಿತ್ರ ಬಿಡಿಸುವ ದೇಶಿ ಕಲೆ ಕೂಡ ತೊಟ್ಟಿಲುಗಳ ಮೆರಗು ಹೆಚ್ಚಿಸುತ್ತದೆ. ತಾಳಿಕೆ, ಬಾಳಿಕೆ ಮತ್ತು ಕುಶಲತೆಯೇ ಪ್ರಧಾನವಾಗಿದ್ದರಿಂದ ಇಂದಿಗೂ ಕಲಘಟಗಿ ತೊಟ್ಟಿಲಿಗೆ ದೇಶ-ವಿದೇಶಗಳಿಗೆ ಹೋಗುವ ಭಾಗ್ಯ ಲಭಿಸುತ್ತಿರುವುದು ದೇಶಿ ಜ್ಞಾನ ಪರಂಪರೆಗೆ ಸಿಕ್ಕ ಮನ್ನಣೆ.

ಅಜ್ಜ,ಮುತ್ತಜ್ಜರ ಕಾಲದಿಂದಲೂ ನನಗೆ ಒಂದು ಹಠವಿತ್ತು. ಕಷ್ಟಪಟ್ಟು ಮಾಡಿದ ತೊಟ್ಟಿಲುಗಳು ಜನಮಾನಸದ ಮೆಚ್ಚುಗೆ ಪಡೆಯಬೇಕು ಎಂದು. ಇದೀಗ ನಾನು ಮಾಡಿದ ತೊಟ್ಟಿಲು ಡಾ.ರಾಜ್‌  ಸಂಬಂಧಿಗಳ ಮೂಲಕ ಅಮೆರಿಕಾಕ್ಕೂ ಹೋಗುತ್ತಿದ್ದು, ನನ್ನ ಶ್ರಮ ಸಾರ್ಥಕ ಎನಿಸುತ್ತಿದೆ.
– ಮಾರುತಿ ಬಡಿಗೇರ, ತೊಟ್ಟಿಲು ತಯಾರಕ.

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next