ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿಗೆ ದಿನಗಣನೆ ಆರಂಭವಾಗಿದ್ದು, ಜೂ.21ರಿಂದ 24ರವರೆಗೆ ಅವರು ಅಮೆರಿಕದ ಅಧಿಕೃತ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಲಿದ್ದಾರೆ.
ಮೋದಿಯವರ ಭೇಟಿ ಮೂಲಕ ಭಾರತ ಮತ್ತು ಅಮೆರಿಕದ ಬಾಂಧವ್ಯದ ಹೊಸ ಶಕೆ ಆರಂಭವಾಗಲಿದ್ದು, 21ನೇ ಶತಮಾನದ ನಿರ್ಣಾಯಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಈ ಭೇಟಿ ಬಗ್ಗೆ ಅಮೆರಿಕದಲ್ಲಿರುವ ಭಾರತೀಯರೆಲ್ಲರೂ ಉತ್ಸುಕರಾಗಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ. ಜೂ.22ರಂದು ಮೋದಿಯವರಿಗೆಂದೇ ಅಧ್ಯಕ್ಷ ಜೋ ಬೈಡೆನ್ ಮತ್ತು ಪತ್ನಿ ಜಿಲ್ ಬೈಡೆನ್ ಅವರು ವಿಶೇಷ ಔತಣಕೂಟ ಆಯೋಜಿಸಿದ್ದಾರೆ. ಅಮೆರಿಕ ಸರ್ಕಾರಿ ಪ್ರಾಯೋಜಿತ ಔತಣಕೂಟಕ್ಕೆ ಆಹ್ವಾನಿಸಲಾಗಿರುವ ಅತಿಥಿಗಳ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ಮೂಲಗಳ ಪ್ರಕಾರ, 120ಕ್ಕೂ ಹೆಚ್ಚು ಮಂದಿ ಶ್ವೇತಭವನದ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಹೋಟೆಲ್ ಕೊಠಡಿ ದರ ದಿಢೀರ್ ಹೆಚ್ಚಳ
ಪ್ರಧಾನಿ ಮೋದಿ ಭೇಟಿ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಮೆರಿಕದ ಮೂಲೆ ಮೂಲೆಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಹೀಗಾಗಿ, ವಾಷಿಂಗ್ಟನ್ ಡಿಸಿಯಲ್ಲಿ ಹೋಟೆಲ್ ರೂಂಗಳು ಮತ್ತು ವಿಮಾನಗಳ ಟಿಕೆಟ್ ದರಗಳಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಶ್ವೇತಭವನದಲ್ಲಿ ನಡೆಯುವ ಸ್ವಾಗತ ಕಾರ್ಯಕ್ರಮದಲ್ಲೂ ಸಾವಿರಾರು ಮಂದಿ ಭಾರತೀಯ ಅಮೆರಿಕನ್ನರು ಭಾಗಿಯಾಗಲಿದ್ದಾರೆ.
ಅಮೆರಿಕದಲ್ಲಿ ಪ್ರಧಾನಿ ಕಾರ್ಯಕ್ರಮ
ಜೂ.21- ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ವಾಷಿಂಗ್ಟನ್ ಡಿಸಿಗೆ ಪ್ರಧಾನಿ ಮೋದಿ ಆಗಮನ
ಜೂ.22- ಶ್ವೇತಭವನದ ಹುಲ್ಲುಹಾಸಿನಲ್ಲಿ ಮೋದಿಯವರಿಗೆ ಬೈಡೆನ್-ಜಿಲ್ ದಂಪತಿ ವತಿಯಿಂದ ವಿಶೇಷ ಔತಣಕೂಟ
ಜೂ.23- ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಅವರು ಆತಿಥ್ಯದಲ್ಲಿ ವಿದೇಶಾಂಗ ಇಲಾಖೆಯ ಫಾಗ್ಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನದ ಭೋಜನ.
ಜೂ.23- ವಾಷಿಂಗ್ಟನ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಭಾಷಣ.