Advertisement

PM Modi ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

01:12 AM Sep 23, 2024 | Team Udayavani |

ವಿಲ್ಮಿಂಗ್‌ಟನ್‌: ಜಗತ್ತಿನಾದ್ಯಂತ ಯುದ್ಧಕ್ಕೆ ಅಂತ್ಯ ಹಾಡಿ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಶ್ರಮಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

ಉಕ್ರೇನ್‌ ಮತ್ತು ಪೋಲೆಂಡ್‌ಗೆ ಭೇಟಿ ನೀಡಿ ಶಾಂತಿ ಮಂತ್ರ ಬೋಧಿಸಿದ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಡೆಲಾವೆರ್‌ಗೆ ಬಂದಿಳಿಯುತ್ತಿದ್ದಂತೆ ಅವರನ್ನು ಭೇಟಿ ಮಾಡಿದ ಬೈಡೆನ್‌ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಗತ್ತಿನಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಭಾರತ ಧ್ವನಿ ಎತ್ತುತ್ತಿರುವುದು ಉತ್ತಮ ನಡೆ ಎಂದಿದ್ದಾರೆ.

ಮೋದಿ ಹಾಗೂ ಬೈಡೆನ್‌ ಮಾತುಕತೆಯ ಬಗ್ಗೆ ವಿವರ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, “ಬೈಡೆನ್‌ ಹಾಗೂ ಮೋದಿ ನಡುವೆ ಪ್ರಮುಖ ವಿಷಯಗಳ ಮಾತುಕತೆ ನಡೆದಿದೆ. ಯುದ್ಧ ತಡೆಗಟ್ಟುವ ಬಗ್ಗೆ ಹಲವು ನಾಯಕರ ಜತೆ ಮಾತುಕತೆ ನಡೆಸಲಾಗಿದೆ’ ಎಂದಿದ್ದಾರೆ.

ಮೋದಿ ನಾಯಕತ್ವಕ್ಕೆ ಬಹುಪರಾಕ್‌
ಈ ನಡುವೆ ಜಿ20, ಗ್ಲೋಬಲ್‌ ಸೌತ್‌ನಲ್ಲಿ ಮೋದಿ ಅವರ ನಾಯಕತ್ವದ ಬಗ್ಗೆ ಕೂಡ ಬೈಡೆನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್‌-19 ಸಹಿತ ಜಗತ್ತು ಎದುರಿಸುತ್ತಿರುವ ಹಲವು ಸವಾಲುಗಳನ್ನು ಸಮರ್ಪಕವಾಗಿ ಎದುರಿಸುವಲ್ಲಿ ಮತ್ತು ಜಾಗತಿಕ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ಪಾತ್ರದ ಬಗ್ಗೆಯೂ ಶ್ಲಾಘಿಸಿದ್ದಾರೆ. ಪೋಲೆಂಡ್‌, ಉಕ್ರೇನ್‌ಗೆ ಪ್ರಧಾನಿ ಮೋದಿಯವರ ಐತಿಹಾಸಿಕ ಭೇಟಿಗೂ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಮೋದಿ ಹೊಸ ಪ್ರಯತ್ನಕ್ಕೆ ಮೆಚ್ಚುಗೆ
ಅಮೆರಿಕ ಮತ್ತು ಭಾರತದ ನಡುವೆ ಸಹಕಾರವನ್ನು ಬಲಪಡಿಸುವುದಕ್ಕಾಗಿ ಮೋದಿ ಅವರು ಹೊಸ ಕ್ಷೇತ್ರಗಳನ್ನು ಹುಡುಕುತ್ತಿರುತ್ತಾರೆ ಎಂದು ಬೈಡೆನ್‌ ಹೇಳಿದ್ದಾರೆ. ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಈಗ ಹೆಚ್ಚು ಸದೃಢಗೊಂಡಿದೆ. ಪ್ರತಿಬಾರಿಯೂ ಮೋದಿ ಹೊಸ ಕ್ಷೇತ್ರಗಳನ್ನು ಹುಡುಕುತ್ತಾರೆ. ಅದು ಈ ವರ್ಷವೂ ಮುಂದುವರಿದಿದೆ ಎಂದು ಬೈಡೆನ್‌ ಟ್ವೀಟ್‌ ಮಾಡಿದ್ದಾರೆ.

ಭಾರತಕ್ಕೆ ಖಾಯಂ ಸ್ಥಾನ
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ದೊರಕಿಸುವ ಬಗ್ಗೆ ಅಮೆರಿಕ ಬೆಂಬಲ ನೀಡುತ್ತದೆ ಎಂದು ಬೈಡೆನ್‌ ಘೋಷಿಸಿದ್ದಾರೆ ಎಂದು ಉಭಯ ದೇಶಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉಕ್ರೇನ್‌ ಮತ್ತು ಪೋಲೆಂಡ್‌ಗಳಿಗೆ ಭೇಟಿ ನೀಡಿ ಮೋದಿ ಶಾಂತಿ ಮಂತ್ರ ಬೋಧಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಕೈಗೊಳ್ಳುತ್ತಿರುವ ಈ ಕಾರ್ಯಕ್ಕೆ ಹೆಚ್ಚಿನ ಬೆಂಬಲ ಸಿಗಬೇಕು ಎಂದು ಅವರು ಹೇಳಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಉಕ್ರೇನ್‌ಗೆ ಭೇಟಿ ನೀಡಿದ್ದ ಮೋದಿ ವೊಲೊಡಿಮಿರ್‌ ಝೆಲೆನ್‌ಸ್ಕಿಗೆ ಶಾಂತಿ ಪಾಠ ಹೇಳಿದ್ದರು. ಅಲ್ಲದೆ ಪುತಿನ್‌ಗೂ ಇದೇ ಸಲಹೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next