ಮೈಸೂರು: ಭೂ ಸುಧಾರಣಾ ಕಾಯ್ದೆಯ ಕೆಲವು ನಿಬಂಧನೆಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸರ್ಕಾರ ಮತ್ತು ರೈತರ ನಡುವೆ ರಾಯಭಾರಿಯಂತೆ ಬಿಜೆಪಿ ರೈತ ಮೋರ್ಚಾ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೈತರಿಗೆ ತಿಳಿಸುವ ಕಾಯಕವನ್ನು ರೈತ ಮೋರ್ಚಾ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಭೂ ಸುಧಾರಣೆ ಕಾಯ್ದೆ ಹಳೆಯ ಕಾಯ್ದೆಯಾಗಿದ್ದು, ಕಾಲ ಕಾಲಕ್ಕೆ ತಿದ್ದುಪಡಿಯಾಗಬೇಕು. ಅದರಲ್ಲಿ ಕೆಲವು ನಿಬಂಧನೆಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ. ಕಾಲಕ್ಕೆ ತಕ್ಕಂತೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ ಎಂದರು.
ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಯಾರೇ ಭಾಗಿ ಯಾಗಿದ್ದರೂ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ತಪ್ಪಿತಸ್ಥರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಗುರುಲಿಂಗನ ಗೌಡ್, ರಾಜ್ಯ ಉಪಾಧ್ಯಕ್ಷ ನಂಜುಂಡೇಗೌಡ, ಕಾರ್ಯ ದರ್ಶಿ ನವೀನ್, ರಾಜ್ಯ ಖಜಾಂಚಿ ಮಲ್ಲೇಶ್ ರೆಡ್ಡಿ, ನಗರಾಧ್ಯಕ್ಷ ಕೆ.ದೇವರಾಜ್, ಜಿಲ್ಲಾಧ್ಯಕ್ಷ ರಮೇಶ್ ಕುಮಾರ್, ಉಪಾಧ್ಯಕ್ಷ ಲೋಕೇಶ್ ಇದ್ದರು.