ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೆ, ಪ್ರತಿಪಕ್ಷಗಳು ತಮ್ಮ ರಾಜಕೀಯ ಅಸ್ವಿತ್ವಕ್ಕಾಗಿ ರೈತರನ್ನು ದಾರಿ ತಪ್ಪಿಸುತ್ತಿವೆ. ರೈತರ ಮುಖವಾಡ ಧರಿಸಿ ಹೋರಾಟಕ್ಕೆ ಇಳಿದಿವೆ ಎಂದು ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ಸುಧಾರಣೆಗಾಗಿ ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ (ಕಲ್ಯಾಣ ಮತ್ತುರಕ್ಷಣೆ) ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ ಅನುಷ್ಠಾನಕ್ಕೆ ತರಲಾಗಿದೆ ಎಂದರು. ಇಂತಹ ಕಾಯ್ದೆಗಳು ಈಗ ರೂಪುಗೊಂಡಿಲ್ಲ. 2011ರಲ್ಲಿಕಾಂಗ್ರೆಸ್ ಸರ್ಕಾರದ ಅವ ಧಿಯಲ್ಲಿ ಕೃಷಿ ಸಚಿವರಾಗಿದ್ದ ಶರದ್ ಯಾದವ್ ಮಾದರಿ ಕಾಯ್ದೆಗಳ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಇದೇ ಅಂಶಗಳನ್ನು ಕಾಂಗ್ರೆಸ್ ಪಕ್ಷ 2014 ಮತ್ತು 2019ರತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು. ಈ ಬಗ್ಗೆ 2018-19ರ ಸಂಸತ್ತಿನ ಕೃಷಿ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲಾಗಿದ್ದು, ಸಮಿತಿಯು ಸಲಹೆಗಳನ್ನು ಒಳಗೊಂಡಂತೆ ಈ ಮಸೂದೆ ತರಲಾಗಿದೆ ಎಂದು ಸರ್ಮಥಿಸಿಕೊಂಡರು.
ಸಮಸ್ಯೆಗಳ ಪರಿಹಾರಕ್ಕಾಗಿ ಉನ್ನತಾಧಿಕಾರ ಸಮಿತಿ ರಚಿಸಲಾಗಿದ್ದು, ಆ ಸಮಿತಿಯಲ್ಲಿ ಕಾಂಗ್ರೆಸ್‌ನ ಕಮಲ್‌ನಾಥ್ ಹಾಗೂ ಕ್ಯಾ.ಅಮರಿಂದರ್ ಸಿಂಗ್ ಸದಸ್ಯರಾಗಿದ್ದಾರೆ. ಆ ಸಮಿತಿ ಸಲಹೆಯಂತೆ ಇದೇ ಸೆಪ್ಟೆಂಬರ್‌ನಲ್ಲಿ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅತಿ ಹೆಚ್ಚು ಪ್ರಮಾಣದ ರೈತರ ಉತ್ಪನ್ನಗಳನ್ನು ಖರೀದಿಸಲಾಗಿದೆ. ಇದು ಕನಿಷ್ಠ ಬೆಂಬಲ ಯೋಜನೆಯ ರದ್ದತಿ ಕುರಿತಾದ ಆರೋಪ ಸುಳ್ಳು ಎಂಬುವುದನ್ನು ಸಾಬೀತುಗೊಳಿಸುತ್ತಿದೆ ಎಂದರು.
ಆತ್ಮನಿರ್ಭರ ಭಾರತ ಯೋಜನೆಯಡಿ ಒಂದು ಲಕ್ಷ ಕೋಟಿ ರೂ. ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. “ಬೀಜ್ ಸೇ ಬಜಾರ್‌ತಕ್’, ಬೇವು ಲೇಪಿತ ಯೂರಿಯಾ, ಕಿಸಾನ್ ಕಾರ್ಡ್ ವಿತರಣೆ, ಫಸಲ್ ವಿಮಾಯೋಜನೆ, ಕಿಸಾನ್ ಸಮ್ಮಾನ್, ಇ-ಮಾರುಕಟ್ಟೆ ಸೇರಿದಂತೆ ಹಲವು ರೈತ ಪರ ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಆದರೆ, ದೇಶಾದ್ಯಂತ ಚುನಾವಣೆಯಲ್ಲಿ ಸೋತಿರುವ ಪ್ರತಿಪಕ್ಷಗಳು ಹತಾಶೆಯಿಂದ ರೈತರನ್ನು ಮೋದಿ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ದೆಹಲಿಯಲ್ಲಿ ರೈತರ ಪ್ರತಿಭಟನೆ ಶಾಹೀನ್ ಭಾಗ್ ಮಾದರಿಯ ಪ್ರತಿಭಟನೆಯಷ್ಟೇ. ಅವರು ನಿಜವಾದ ರೈತರಲ್ಲ ಎಂದು ಹೇಳಿದರು.
ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ ದಸ್ತಾಪುರ, ಮುಖಂಡರಾದ ಚಂದ್ರಶೇಖರ ರೆಡ್ಡಿ, ಸಾಹೇಬಗೌಡ, ಪ್ರಕಾಶ ಇದ್ದರು.