Advertisement

ಮತಗಳಿಗೆ ಹೆದರಿ ನಿಯಮಗಳಿಗೆ ತಿದ್ದುಪಡಿ

11:41 PM Sep 22, 2019 | Team Udayavani |

ದೇಶದ ರಸ್ತೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಶಿಸ್ತುಬದ್ಧವಾಗಿಸಬೇಕು ಎಂಬ ಆಶಯದಿಂದ ರೂಪಿಸಲಾಗಿದ್ದ ಹೊಸ ಸಾರಿಗೆ ನಿಯಮವನ್ನು ಕರ್ನಾಟಕದಲ್ಲೂ ದುರ್ಬಲಗೊಳಿಸಲಾಗಿದೆ. ಹೊಸ ನಿಯಮದಲ್ಲಿ ಇದ್ದ ದಂಡದ ಮೊತ್ತಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಅಧಿಸೂಚನೆ ಮೂಲಕ ಕೆಲವು ದಂಡದ ಮೊತ್ತಗಳನ್ನು ಕಡಿಮೆ ಮಾಡಿದೆ. ಇದಕ್ಕೂ ಮೊದಲು ಗುಜರಾತ್‌ನಲ್ಲೂ ಇದೇ ಮಾದರಿಯಲ್ಲಿ ಕೆಲವು ದಂಡಗಳನ್ನು ಕಡಿತಗೊಳಿಸಲಾಗಿತ್ತು. ಕರ್ನಾಟಕಕ್ಕೆ ಗುಜರಾತ್‌ ಸರಕಾರ ಕೈಗೊಂಡ ಕ್ರಮವೇ ಮಾದರಿಯಾಯಿತು. ವಿಪಕ್ಷಗಳ ಆಳ್ವಿಕೆಯಿರುವ ರಾಜಸ್ಥಾನ, ಮಧ್ಯ ಪ್ರದೇಶ ಸೇರಿ ಕೆಲವು ರಾಜ್ಯಗಳು ಜನರಿಗೆ ಸಮಸ್ಯೆಯಾ ಗಬಹುದು ಎಂಬ ನೆಪ ಹೇಳಿ ಹೊಸ ಕಾನೂನನ್ನು ಅನುಷ್ಠಾನಿಸಲೇ ಇಲ್ಲ.

Advertisement

ಒಂದು ಉತ್ತಮ ಬದಲಾವಣೆಗೆ ಕಾರಣವಾಗಬಹುದಾಗಿದ್ದ ಕಾನೂನನ್ನು ಯಾವ ರೀತಿ ನಿಷ್ಪ್ರಯೋಜಕಗೊಳಿಸಬಹುದು ಎನ್ನುವುದಕ್ಕೆ ವಿವಿಧ ರಾಜ್ಯ ಸರಕಾರಗಳು ಕೈಗೊಂಡಿರುವ ಈ ಕ್ರಮವೇ ಸಾಕ್ಷಿ. ಹೊಸ ಕಾನೂನಿನಲ್ಲಿ ದಂಡದ ಮೊತ್ತ ವಿಪರೀತವಾಗಿತ್ತು ಎನ್ನುವುದು ನಿಜ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿತ್ತು ಎನ್ನುವುದು ನಿಜವೇ.ಹೀಗಾಗಿ ದಂಡದ ಮೊತ್ತವನ್ನು ತುಸು ಇಳಿಕೆ ಮಾಡಿದ್ದು ಸರಿಯಾದ ಕ್ರಮವೇ. ಆದರೆ ಈ ಮೂಲಕ ಸರಕಾರ ಜನರಿಗೆ ನೀಡುವ ಸಂದೇಶ ಮಾತ್ರ ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ. ಏನನ್ನೇ ಆದರೂ ದೊಡ್ಡ ಬಾಯಿಯಲ್ಲಿ ವಿರೋಧಿಸಿದರೆ ಅದೆಷ್ಟೇ ಒಳ್ಳೆಯದೇ ಆಗಿದ್ದರೂ ಸರಕಾರ ಮಣಿಯುತ್ತದೆ ಎಂಬ ಸಂದೇಶ ಈ ನಿರ್ಧಾರದಿಂದ ರವಾನೆಯಾಗುವ ಅಪಾಯವಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಸರಕಾರಗಳು ಹೆದರಿದ್ದು ಜನರ ಅಭಿಪ್ರಾಯಗಳಿಗೆ ಅಲ್ಲ. ಬದಲಾಗಿ ಕೈತಪ್ಪಿ ಹೋಗಬಹುದಾದ ಮತಗಳಿಗೆ ಎನ್ನುವುದು ಅರಿವಾಗುತ್ತದೆ. ಇದರಲ್ಲಿ ವಿಪಕ್ಷಗಳ ಬೇಜವಾಬ್ದಾರಿತನವೂ ಇದೆ. ಭಾರೀ ದಂಡದ ಮೂಲಕ ಬಡವರನ್ನು ಶೋಷಿಸಲಾಗುತ್ತಿದೆ. ದಂಡದಿಂದಾಗಿ ಬಡಪಾಯಿ ಜನರ ಹೆಂಡತಿ ಮಕ್ಕಳು ಉಪವಾಸ ಮಲಗುವ ಸ್ಥಿತಿ ಸೃಷ್ಟಿಯಾಗಿದೆ. ಇದು ಭೀಕರ, ಕರಾಳ ಶಾಸನ ಎಂಬ ನಂಬಿಕೆಯನ್ನು ಹುಟ್ಟಿಸುವಲ್ಲಿ ವಿಪಕ್ಷಗಳು ಸಫ‌ಲವಾಗಿದ್ದವು.ಜತೆಗೆ ಸ್ಕೂಟರ್‌ ಸವಾರನಿಗೆ 15,000 ರೂ. ದಂಡ ಹಾಕಿದ್ದು, ಲಾರಿ ಚಾಲಕನಿಗೆ 6 ಲ. ರೂ. ದಂಡ ಹಾಕಿದಂಥ ಸುದ್ದಿಗಳು ಅತಿರಂಜಿತವಾಗಿ ವರದಿಯಾದವು. ಎಲ್ಲರೂ ಚರ್ಚಿಸಿದ್ದು ವಿಪರೀತ ದಂಡದ ಮೊತ್ತದ ಬಗ್ಗೆಯೇ ಹೊರತು ಅದರ ಉದ್ದೇಶ ಹಾಗೂ ಭವಿಷ್ಯದಲ್ಲಿ ಅದು ಬೀರಬಹುದಾದ ಪರಿಣಾಮದ ಬಗ್ಗೆ ಅಲ್ಲ. ಎಲ್ಲ ದಾಖಲೆಪತ್ರಗಳನ್ನು ಸರಿಯಾಗಿಟ್ಟುಕೊಂಡು, ಸಂಚಾರ ನಿಯಮಗಳನ್ನೆಲ್ಲ ಸಮರ್ಪಕವಾಗಿ ಪಾಲಿಸಿದರೆ ಯಾಕಾದರೂ ಪೊಲೀಸರು ದಂಡ ಹಾಕುತ್ತಾರೆ ಎಂದು ಯಾರೂ ಕೇಳಲೂ ಇಲ,É ಹೇಳಲೂ ಇಲ್ಲ.

ಈ ಸಂದರ್ಭದಲ್ಲಿ ವರ್ಷಕ್ಕೆ ರಸ್ತೆ ಅಪಘಾತವೊಂದಕ್ಕೆ 1.5 ಲಕ್ಷ ಜನರು ಬಲಿಯಾಗುತ್ತಾರೆ, 5 ಲಕ್ಷದಷ್ಟು ಮಂದಿ ಅಂಗವಿಕಲರಾಗುತ್ತಾರೆ ಎಂಬಿತ್ಯಾದಿ ಬೆಚ್ಚಿಬೀಳಿಸುವ ಅಂಕಿಅಂಶಗಳು ಯಾರಿಗೂ ಮುಖ್ಯ ಎಂದೆನಿಸಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಡಿಯಲ್ಲಿ 2020ಕ್ಕಾಗುವಾಗ ರಸ್ತೆ ಅಪಘಾತಗಳನ್ನು ಶೇ. 50 ಕಡಿಮೆಗೊಳಿಸುವ ಬದ್ಧತೆಗೆ ಭಾರತ ಅಂಕಿತ ಹಾಕಿದೆ. ಈ ಗುರಿಯನ್ನು ಸಾಧಿಸಲು ಹೊಸ ಸಾರಿಗೆ ನಿಯಮ ಪೂರಕವಾಗಿತ್ತು.

ನಮ್ಮ ದೇಶದಲ್ಲಿ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿದೆ, ಅವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸುತ್ತಾರೆ, ನಿಯಮ ಅನುಷ್ಠಾನಕರು ಚಾಲಕರನ್ನು ಪೀಡಿಸುತ್ತಾರೆ ಎಂಬಿತ್ಯಾದಿ ಕಾರಣಗಳನ್ನು ವಿಪರೀತ ದಂಡದ ಮೊತ್ತವನ್ನು ವಿರೋಧಿಸಲು ಬಳಸಿಕೊಳ್ಳಲಾಗಿದೆ. ನಮ್ಮ ರಸ್ತೆಗಳು ಸರಿಯಿಲ್ಲ, ಕೆಲವೊಮ್ಮೆ ನಿಯಮ ಅನುಷ್ಠಾನಕರೇ ನಿಯಮಗಳನ್ನು ಮುರಿಯುತ್ತಾರೆ ಎನ್ನುವುದೆಲ್ಲ ನಿಜವೇ. ಹಾಗೆಂದು ಇದು ನಾವು ನಿಯಮ ಉಲ್ಲಂ ಸಲು ನೆಪವಾಗಬಾರದು. ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಸರಿಯಾದ ರಸ್ತೆ ನಿರ್ಮಿಸಿಕೊಡಿ ಎಂದು ಕೇಳುವ ನಮ್ಮ ನೈತಿಕ ಧ್ವನಿಗೆ ಇನ್ನಷ್ಟು ಬಲ ಬರುತ್ತಿತ್ತು.ಆದರೆ ಜನರಿಗೆ ನಿಯಮ ಪಾಲನೆಯ ಅಗತ್ಯವಿಲ್ಲ ಎಂದಾದರೆ ಆಳುವವರು ಏಕೆ ತಲೆಕೆಡಿಕೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಥಾ ಪ್ರಜಾ ತಥಾ ರಾಜ ಅಲ್ಲವೆ? ನಾವು ಹೇಗಿರುತ್ತೇವೋ ಅದೇ ರೀತಿ ನಮ್ಮನ್ನು ಆಳುವವರು ಇರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next