Advertisement

ಕೃಷಿ ವಿವಿ ಖಾಸಗೀಕರಣ ತಡೆಯಲು ಕಾಯ್ದೆಗೆ ತಿದ್ದುಪಡಿ 

06:00 AM Jun 20, 2018 | Team Udayavani |

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳ ಖಾಸಗೀಕರಣ ವಿರೋಧಿಸಿ ಕೃಷಿ ವಿವಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ತಕ್ಷಣ ಸ್ಪಂದಿಸಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಕೃಷಿ ವಿಶ್ವವಿದ್ಯಾಲಯಗಳ ಖಾಸಗೀಕರಣ ತಡೆಯಲು ಕಾಯ್ದೆಗೆ ತಿದ್ದುಪಡಿ ತರುವುದಾಗಿ ಭರವಸೆ ನೀಡಿದ್ದಾರೆ.

Advertisement

ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ಸಂಜೆ ಕೃಷಿ ಸಚಿವ ಶಿವಶಂಕರ ರೆಡ್ಡಿ, ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ವಿದ್ಯಾರ್ಥಿಗಳ ಅಹವಾಲು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಕೃಷಿ ವಿವಿಗಳ ಖಾಸಗೀಕರಣ ತಪ್ಪಿಸಲು ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಕೂಲಂಕಷ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಬಳಿಕ ಪ್ರತಿಕ್ರಿಯಿಸಿದ ನಟ, ಹೋರಾಟಗಾರ ಚೇತನ್‌, ಕೃಷಿ ವಿವಿ ಖಾಸಗೀಕರಣ ವಿರೋಧಿಸಿ ಮಂಗಳವಾರ ಬೆಳಗ್ಗೆ ಧರಣಿ ಆರಂಭಿಸಲಾಯಿತು. ಸ್ಥಳಕ್ಕೆ ಬಂದ ಮುಖ್ಯಮಂತ್ರಿಗಳು ಸಂಜೆ ಸಭೆ ಕರೆಯುವುದಾಗಿ ತಿಳಿಸಿದ್ದರು. ಅದರಂತೆ ಕೃಷಿ ಸಚಿವರು, ಅಧಿಕಾರಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಅಹವಾಲು ಆಲಿಸಿದ್ದಾರೆ. ಅಪಾಯಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯ ಮಂತ್ರಿಗಳು, ಕೃಷಿ ಕ್ಷೇತ್ರದ ಅಧ್ಯಯನದಲ್ಲೂ ಗುಣಮಟ್ಟ ಕಾಯ್ದುಕೊಳ್ಳಬೇಕಿದ್ದು, ಇದಕ್ಕೆ ಆದ್ಯತೆ ನೀಡಲಾಗುವುದು. ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.

ಜತೆಗೆ ನಿರಂತರವಾಗಿ ಅವುಗಳ ಅನುಷ್ಠಾನ ಸಂಬಂಧ ಮೇಲ್ವಿಚಾರಣೆ ನಡೆಸುವಂತೆಯೂ ತಿಳಿಸಿದರು ಎಂದು ಹೇಳಿ ದರು. ಕೃಷಿ ಸಚಿವರು ಬುಧವಾರ ಈ ಬಗ್ಗೆ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ. 2016ರಲ್ಲಿ ಅಧಿಕಾರದಲ್ಲಿ ಇಲ್ಲದಿದ್ದಾಗ ಸ್ಪಂದಿಸಿದ್ದ ಕುಮಾರಸ್ವಾಮಿಯವರು ಸಿಎಂ ಆದ ಬಳಿಕವೂ ಸ್ಪಂದಿಸುವ ವಿಶ್ವಾಸವಿದೆ ಎಂದರು.

ಜುಲೈ 4ರಿಂದ ಬಜೆಟ್‌ ಅಧಿವೇಶನ?
ಬೆಂಗಳೂರು: ಜುಲೈ 4 ರಿಂದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ನಡೆಯುವ ಸಾಧ್ಯತೆಯಿದೆ. 4ರಿಂದ 24ರ ವರೆಗೆ ಬಜೆಟ್‌ ಅಧಿವೇಶನ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ. ಅಷ್ಟರಲ್ಲಿ ಸಂಪುಟ ವಿಸ್ತರಣೆಯೂ ನಡೆಯಲಿದೆ ಎಂದು ಹೇಳಲಾಗಿದೆ. 4ರಿಂದ ಅಧಿವೇಶನ ಆರಂಭವಾಗಲಿ ದ್ದು, 5ರಂದು ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಅಧಿವೇಶನಕ್ಕೂ ಮೊದಲೇ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಹಾಗೂ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಿದರೆ, ಕಾಂಗ್ರೆಸ್‌ ಶಾಸಕರ ಅಸಮಾಧಾನ ಕಡಿಮೆ ಮಾಡಬಹುದು. ಇದರಿಂದ ಅಧಿವೇಶನ ಸುಗಮವಾಗಿ ನಡೆಸಲು ಸಹಕಾರಿಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಮುಂಚೆ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next