Advertisement

ಆರ್‌ಟಿಇಯಲ್ಲಿ ತಿದ್ದುಪಡಿ: ಹೆತ್ತವರ ನಿರಾಸಕ್ತಿ

07:04 AM May 09, 2019 | mahesh |

ಪುತ್ತೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನಗೊಂಡ ಬಳಿಕ ಇದೇ ಮೊದಲ ಬಾರಿಗೆ ಆರ್‌ಟಿಇ ಸೀಟುಗಳು ಬೇಡಿಕೆ ಕಳೆದುಕೊಂಡಿದ್ದು, ಪುತ್ತೂರಿನಲ್ಲಿ ಈ ಬಾರಿ 41 ಸೀಟುಗಳನ್ನು ಮೀಸಲಿಟ್ಟಿದ್ದರೂ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ!

Advertisement

ಸರಕಾರವು ಆರ್‌ಟಿಇನಲ್ಲಿ ತಿದ್ದುಪಡಿ ತಂದು ಅನುದಾನಿತ ಶಾಲೆಗಳಿಗೆ ಆದ್ಯತೆ ನೀಡಿದ ಪರಿಣಾಮ ಆರ್‌ಟಿಇ ಅಡಿ ತಮ್ಮ ಮಕ್ಕಳನ್ನು ದಾಖಲಿಸಲು ಹೆತ್ತವರು ಮುಂದೆ ಬರುತ್ತಿಲ್ಲ. ಹೀಗಾಗಿ 2012ರಲ್ಲಿ ರಾಜ್ಯದಲ್ಲಿ ಆರ್‌ಟಿಇ ಅನುಷ್ಠಾನಗೊಂಡ ಬಳಿಕ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಯಾವುದೇ ಅರ್ಜಿಗಳು ಸಲ್ಲಿಕೆಯಾಗದೇ ಇರುವುದು ವಿಶೇಷ.

ಈ ಹಿಂದಿನಿಂದಲೂ ಸರಕಾರ ಆರ್‌ಟಿಇ ಸೀಟು ಹಂಚಿಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದ ಪರಿಣಾಮ, ಹೆಚ್ಚಿನ ಹೆತ್ತವರು ಅರ್ಜಿ ಸಲ್ಲಿಕೆ ಆರ್‌ಟಿಇ ಸೀಟಿಗೆ ಕಾದು ಬಳಿಕ ತಮ್ಮ ಮಕ್ಕಳನ್ನು ಶುಲ್ಕ ಪಾವತಿಸಿಯೇ ಶಾಲೆಗೆ ದಾಖಲಿಸುತ್ತಿದ್ದರು. ಅಂದರೆ ಮೂರು ಹಂತಗಳಲ್ಲಿ ಆರ್‌ಟಿಇ ಸೀಟು ಹಂಚಿಕೆಯಾಗುವ ಪರಿಣಾಮ ಮೊದಲ ಹಂತದಲ್ಲಿ ಬಹುತೇಕ ಮಂದಿ ಆರ್‌ಟಿಇನ ಲಾಭ ಪಡೆದರೆ, ಉಳಿದ ಹಂತಗಳಲ್ಲಿ ಕೆಲವರು ಮಾತ್ರ ಆರ್‌ಟಿಇನಡಿ ಮಕ್ಕಳನ್ನು ದಾಖಲಿಸುತ್ತಿದ್ದರು. ಆದರೆ ಈ ಬಾರಿ ಅನುದಾನಿತ ಶಾಲೆಗಳಲ್ಲಿ ಕನ್ನಡಕ್ಕೆ ಮಾತ್ರ ಅವಕಾಶವಿರುವುದರಿಂದ ಯಾರೂ ಆರ್‌ಟಿಇಗೆ ಆಸಕ್ತಿ ತೋರಿಸುತ್ತಿಲ್ಲ.

ಕಳೆದ ವರ್ಷ 445 ಸೀಟುಗಳು
ಕಳೆದ ವರ್ಷ ಪುತ್ತೂರು ತಾಲೂಕಿನಲ್ಲಿ ಒಟ್ಟು ಮೂರು ಹಂತಗಳಲ್ಲಿ 445 ಸೀಟುಗಳನ್ನು ಆರ್‌ಟಿಇ ಅಡಿ ಮೀಸಲಿಡಲಾಗಿತ್ತು. ಕಳೆದ ವರ್ಷ 201 ಮಂದಿ ಖಾಸಗಿ ಶಾಲೆಗಳ ಎಲ್ಕೆಜಿಗೆ ದಾಖಲಾಗಿದ್ದರು. ಒಟ್ಟು 1,794 ವಿದ್ಯಾರ್ಥಿಗಳು 34 ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರು. ಆರ್‌ಟಿಇ ಅಡಿ ಸೀಟು ನೀಡಿರುವ ವಿದ್ಯಾಸಂಸ್ಥೆಗಳಿಗೆ 2 ಹಂತಗಳಲ್ಲಿ ಅನುದಾನ ಬಿಡುಗಡೆಯಾಗುತ್ತಿದ್ದು, ಮುಂದಿನ 4 ದಿನಗಳಲ್ಲಿ ಎಲ್ಲ ವಿದ್ಯಾ ಸಂಸ್ಥೆಗಳಿಗೂ ಮೊದಲ ಹಂತದ ಅನುದಾನ ಅವರ ಖಾತೆಗೆ ಜಮೆಯಾಗಲಿದೆ ಎಂದು ಬಿಇಒ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

7 ಶಾಲೆಗಳಲ್ಲಿ 41 ಸೀಟುಗಳು
ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ 2 ಸೀಟುಗಳು, ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲೆಯಲ್ಲಿ 6 ಸೀಟುಗಳು, ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿ.ಪ್ರಾ. ಶಾಲೆಯಲ್ಲಿ 4 ಸೀಟುಗಳು, ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ 3 ಸೀಟುಗಳು, ನೆಟ್ಟಣಿಗೆಮುಟ್ನೂರು ಪಾಲೆತ್ತಡ್ಕ ಶ್ರೀ ಗಜಾನನ ಹಿ.ಪ್ರಾ. ಶಾಲೆಯಲ್ಲಿ 13 ಸೀಟುಗಳು, ಪಡುವನ್ನೂರು ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿ.ಪ್ರಾ. ಶಾಲೆಯಲ್ಲಿ 5 ಸೀಟುಗಳು ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಹಿ.ಪ್ರಾ. ಶಾಲೆಯಲ್ಲಿ 8 ಸೀಟುಗಳು ಸೇರಿ ಒಟ್ಟು 7 ಶಾಲೆಗಳಲ್ಲಿ 41 ಸೀಟುಗಳನ್ನು ಮಾತ್ರ ಆರ್‌ಟಿಇ ಅಡಿ ಮೀಸಲಿರಿಸಲಾಗಿದೆ.

Advertisement

ಈ ಬಾರಿ ಬದಲಾವಣೆಆರ್‌ಟಿಇ ಸೀಟು ಪಡೆಯುವುದಕ್ಕೆ ಈ ಬಾರಿ ಬದಲಾವಣೆ ಮಾಡಿದ್ದು, ಅನುದಾನಿತ ಶಾಲೆಗಳಿಗೆ ಮಾತ್ರ ಅವಕಾಶವಿದೆ. ಅದರಲ್ಲೂ ಸರಕಾರಿ ಶಾಲೆಗಳಿದ್ದ ಪ್ರದೇಶದಲ್ಲಿ ಆರ್‌ಟಿಇ ಸೀಟುಗಳಿಗೆ ಅವಕಾಶವಿಲ್ಲ. ಆರ್‌ಟಿಇ ಅರ್ಜಿ ಸಲ್ಲಿಕೆ, ಸೀಟು ಹಂಚಿಕೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ.
– ಸುಂದರ ಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next