ಬೆಂಗಳೂರು: ಬಿಬಿಎಂಪಿ ಬೊಮ್ಮನಹಳ್ಳಿ ವಲಯದಲ್ಲಿ ಸೋಂಕಿತರ ಚಿಕಿತ್ಸೆಗೆ ವಾರ್ಡ್‌ಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬೊಮ್ಮನಹಳ್ಳಿ ವಲಯ ಕೊರೊನಾ ಉಸ್ತುವಾರಿ ಸಚಿವರನ್ನಾಗಿ ಸುರೇಶ್ ಕುಮಾರ್‌ರನ್ನು ನೇಮಕ ಮಾಡಿದ ಮೇಲೆ ಭಾನುವಾರ ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ಮೊದಲ ಸಭೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ವಿಳಂಬವಾಗುತ್ತಿರುವುದಕ್ಕೆ ಸರಿಯಾದ ಸಮಯದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳದೆ ಇರುವುದು ಕಾರಣ ಈ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‌ಗೂ ಸೋಂಕು ತಡೆಗೆ ಒಂದು ಆ್ಯಂಬುಲೆನ್ಸ್ ಮೀಸಲಿಡಲು ಸೂಚನೆ ನೀಡಲಾಗಿದೆ ಎಂದರು. ಇನ್ನು ಸರ್ಕಾರದ ಸೂಚನೆಯಂತೆ ಖಾಸಗಿ ಆಸ್ಪತ್ರೆ ನಿಗದಿತ ಸಂಖ್ಯೆಯ ಹಾಸಿಗೆ ನೀಡದೆ ಇರುವುದು ಆಕ್ಷೇಪಾರ್ಹ. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿ, ಕೂಡಲೇ ಹಾಸಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗುವುದು. ಆದೇಶಕ್ಕೆ ಬೆಲೆ ಕೊಡದೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆ ವರದಿ ಬರುವುದಕ್ಕೆ ಸರಾಸರಿ 4-5 ದಿನಗಳಾಗುತ್ತಿವೆ. ಇನ್ನು ಮುಂದೆ ಒಂದು ದಿನದಲ್ಲಿ ಫಲಿತಾಂಶ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಂ.ಕೃಷ್ಣಪ್ಪ, ಸತೀಶ್ ರೆಡ್ಡಿ, ಐಎಎಸ್ ಅಧಿಕಾರಿ ಮಣಿವಣ್ಣನ್, ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಮತ್ತಿತರರಿದ್ದರು.