ರಾಮನಗರ: ಆರೋಗ್ಯ ಇಲಾಖೆಯಲ್ಲಿನ ಆ್ಯಂಬುಲೆನ್ಸ್‌ಗಳು ಕೆಟ್ಟು ನಿಂತು ಬಡರೋಗಿಗಳು ಪರದಾಡುವಂತ ಸ್ಥಿತಿ ಇತ್ತು. ಈ ಬಗ್ಗೆ ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿಯಿಂದ ಎಚ್ಚೆತ್ತ ಅಧಿಕಾರಿಗಳು ಆ್ಯಂಬುಲೆನ್ಸ್ ವಾಹನಗಳ ರಿಪೇರಿ ಮಾಡಿ ಸೇವೆಗೆ ಸಮರ್ಪಿಸಿದ್ದಾರೆ.
ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆ ಹೊಣೆ ಹೊತ್ತಿರುವ ಜಿವಿಕೆ ಸಂಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ಮೂರು 108 ಆ್ಯಂಬುಲೆನ್ಸ್ ಕೆಟ್ಟು ನಿಂತಿದ್ದವು. ಜಿಲ್ಲೆಯಲ್ಲಿ ಲಭ್ಯವಿರುವ 12 ವಾಹನದಲ್ಲಿ ಐದು ಕೆಟ್ಟು ನಿಂತಿದ್ದವು. ಆ್ಯಂಬುಲೆನ್ಸ್ ವಾಹನದ ಟಯರ್ ಬದಲಾವಣೆಗೂ ಸಂಸ್ಥೆಯಿಂದ ಅನುದಾನ ಬಿಡುಗಡೆ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದ್ದವು. ಚನ್ನಪಟ್ಟಣ ನಗರ, ಕೋಡಂಬಳ್ಳಿ, ಸಾತನೂರ್, ಹಾರೋಹಳ್ಳಿ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ನಿಗದಿಯಾಗಿರುವ 5 ಆ್ಯಂಬುಲೆನ್ಸ್ ವಾಹನ ಕೆಟ್ಟು ನಿಂತಿದ್ದವು. ವಾಹನಗಳ ದುರಸ್ತಿಗೆ ಹಣ ಕೇಳಿದರೆ ಫಂಡ್ ಇಲ್ಲ ಎನ್ನುವ ಸಿದ್ಧ ಉತ್ತರ ಜಿವಿಕೆ ಸಂಸ್ಥೆಯ ಮೇಲಧಿಕಾರಿಗಳು ನೀಡುತ್ತಾರೆ. ಇನ್ನೂ ಆ್ಯಂಬುಲೆನ್ಸ್ ಸೇವೆಯ ಉಸ್ತುವಾರಿ ಅಧಿಕಾರಿಗಳಾದ ಡಿಎಚ್‌ಒ ಈ ಬಗ್ಗೆ ಗಮನಹರಿಸಿಲ್ಲ ಎಂದು ನೊಂದ ಸಿಬ್ಬಂದಿ ಆರೋಪಿಸಿದ್ದರು.
ಸಿಬ್ಬಂದಿಗೆ ಸಂಬಳ ನೀಡದ ಜಿವಿಕೆ: ಈ ನಡುವೆ ಜಿಲ್ಲೆಯಲ್ಲಿ 12 ಆ್ಯಂಬುಲೆನ್ಸ್, 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳುಗಳಿಂದ ಜಿವಿಕೆ ಸಂಸ್ಥೆ ಸಂಬಳ ನೀಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಅಳಲು ತೋಡಿಕೊಂಡರು. ಇನ್ನೂ ಸಿಬ್ಬಂದಿಗೆ ಅರ್ಹತೆಗೆ ತಕ್ಕಂತೆ ಸಂಬಳ ನೀಡುತ್ತಿಲ್ಲ. 10 ವರ್ಷ ಅನುಭವ ಇರುವ ಸಿಬ್ಬಂದಿಗೆ ಕೇವಲ 13 ಸಾವಿರ ರೂ. ಸಂಬಳ ನೀಡುತ್ತಿದ್ದಾರೆ ಎಂದು ಆರೋಗ್ಯ ಕವಚ ಸಿಬ್ಬಂದಿ ನೋವು ಹಂಚಿಕೊಂಡಿದ್ದಾರೆ.
ಖಾಸಗಿ ಆ್ಯಂಬುಲೆನ್ಸ್‌ಗಳ ಅಬ್ಬರ: ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಖಾಸಗಿ ಆ್ಯಂಬುಲೆನ್ಸ್‌ಗಳ ದರ್ಬಾರ್ ಹೆಚ್ಚಾಗಿದೆ. ಅನಾರೋಗ್ಯ ಪೀಡಿತರಾಗಿ ಸದ್ಯ ಪ್ರಾಣ ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾಗ ದುಡ್ಡು ಎಷ್ಟೇ ಕೇಳಿದರೂ ಕೊಡ್ತಾರೆ ಎನ್ನುವ ಭಾವನೆಯಲ್ಲಿ ದಂಧೆ ಮಾಡುತ್ತಿದ್ದ ಬಗ್ಗೆ ಉದಯವಾಣಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೆಲ್ಲದರ ಮೇಲೆ ಶಿಸ್ತು ಕ್ರಮ ಕೈಗೊಂಡಿರುವ ಅಧಿ ಕಾರಿಗಳು ಆ್ಯಂಬುಲೆನ್ಸ್ ದುರಸ್ತಿ ಮಾಡಿಸಿದ್ದಾರೆ. ಹಣ ಕೇಳುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿ, ಕೆಲ ಹೊರಗುತ್ತಿಗೆ ನೌಕರರನ್ನು ಕೆಲಸದಿಂದಲೇ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ 10 ಆ್ಯಂಬುಲೆನ್ಸ್(108) ಕಾರ್ಯನಿರ್ವಹಣೆಯಲ್ಲಿವೆ. ಎಲ್ಲವೂ ಸುಸ್ಥಿತಿಯಲ್ಲಿ ಇವೆ. ಉದಯವಾಣಿ ಸುದ್ದಿ ಆಧರಿಸಿ ಜಿವಿಕೆ ಸಂಸ್ಥೆಯ ಮುಖ್ಯಸ್ಥರಿಗೆ ಪತ್ರ ಬರೆದು, ಹಣ ವಸೂಲಿ ಮಾಡುವವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇವೆ. ಸರ್ಕಾರದ ನಿಯಮಾನುಸಾರ ಆ್ಯಂಬುಲೆನ್ಸ್ ಸೇವೆ ಜನರು ಸದ್ಬಳಕೆ ಮಾಡಿಕೊಳ್ಳಲಿ.
-ಕಾಂತರಾಜು, ಡಿಎಚ್‌ಒ, ರಾಮನಗರ.
ಬಡವರಿಗೆ ಉಪಯೋಗ ಆಗಲಿ ಎಂದು 108 ಆ್ಯಂಬುಲೆನ್ಸ್ ಆರಂಭಿಸಲಾಗಿತ್ತು. ಇದು ಸಮರ್ಪಕವಾಗಿ ಬಳಕೆ ಆಗುತ್ತಿರಲಿಲ್ಲ. ಈ ಬಗ್ಗೆ ಉದಯವಾಣಿಯಲ್ಲಿ ಸುದ್ದಿಪ್ರಕಟಿ ಇಲಾಖೆ ಗಮನ ಸೆಳೆದಿತ್ತು. ಎಚ್ಚೆತ್ತ ಅಕಾರಿಗಳು ಆ್ಯಂಬುಲೆನ್ಸ್ ದುರಸ್ತಿ ಮಾಡಿಸಿ, ಹಣ ವಸೂಲಿ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.
– ಅಸ್ಲಂ ಪಾಷಾ, ಆರ್‌ಟಿಐ ಕಾರ್ಯಕರ್ತ