ಕೊಪ್ಪಳ: ನಗರದ ಜಿಲ್ಲಾ ಜಿಲ್ಲಾಸ್ಪತ್ರೆಯಲ್ಲಿ ಎರಡು ಆಂಬ್ಯುಲೆನ್ಸ್‌ಗಳಿವೆ. ಆದರೆ ಅವುಗಳನ್ನು 15 ದಿನಗಳಿಂದಲೂ ದುರಸ್ತಿ ಮಾಡಿಸಿಯೇ ಇಲ್ಲ. ಇದರಿಂದ ಆಸ್ಪತ್ರೆಯ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಅನ್ಯ ಊರುಗಳಿಗೆ ಸ್ಥಳಾಂತರಿಸಲು ವಾಹನದ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದ ಬಡವರಿಗೆ ಆರ್ಥಿಕ ಹೊರೆಯಾಗುತ್ತಿದೆ.
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಎರಡು ಸರ್ಕಾರಿ ಆಂಬ್ಯುಲೆನ್ಸ್‌ಗಳಿವೆ. ದಿನದ 24 ಗಂಟೆಯೂ ಅವು ಸೇವೆಗೆ ಸಿದ್ಧವಾಗಿರಬೇಕು. ಕೆಲ ವರ್ಷಗಳಿಂದ ಅವುಗಳು ಜನರಿಗೆ ಸೇವೆ ಕೊಟ್ಟಿವೆ. ಆದರೆ ಕಳೆದ ಕೆಲ ದಿನಗಳಿಂದ ವಾಹನಗಳನ್ನು ರಿಪೇರಿ ಮಾಡಿಸದ ಕಾರಣ ಅವುಗಳು ಆಸ್ಪತ್ರೆ ಮೂಲೆ ಸೇರುವಂತಾಗಿವೆ. ಆಂಬ್ಯುಲೆನ್ಸ್‌ಗೆ ಆಯಿಲ್ ಸರ್ವಿಸ್, ಟೈಯರ್ ರಿಪ್ಲೇಸ್, ಮಷಿನ್ ಚೆಕಪ್ ಸೇರಿದಂತೆ ಕೆಲವು ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಸಬೇಕಿದೆ. ಆದರೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರು, ಮೆಡಿಕಲ್ ಕಾಲೇಜು ನಿರ್ದೇಶಕರು ಈ ಬಗ್ಗೆ ಕಾಳಜಿಯನ್ನೇ ವಹಿಸಿಲ್ಲ. ಅವುಗಳನ್ನು ಇಲ್ಲಿವರೆಗೂ ರಿಪೇರಿ ಮಾಡಿಸಿಯೇ ಇಲ್ಲ. ದುರಸ್ಥಿಗಾಗಿ ಇನ್ನೂ ಪತ್ರ ವ್ಯವಹಾರಗಳೇ ನಡೆಯುತ್ತಿವೆ.
ಜಿಲ್ಲಾಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಹುಬ್ಬಳ್ಳಿ, ಗದಗ ಹಾಗೂ ಧಾರವಾಡಕ್ಕೆ ಶಿಫಾರಸ್ಸು ಮಾಡುವುದೇ ಹೆಚ್ಚಾಗಿದೆ. ಇಲ್ಲಿನ ರೋಗಿಗಳಿಗೆ ಸಣ್ಣ ಸಮಸ್ಯೆಯಿದ್ದರೂ ಹುಬ್ಬಳ್ಳಿ ಕಿಮ್ಸ್, ಇಲ್ಲವೇ ಧಾರವಾಡದ ಎಸ್ ಡಿಎಂಗೆ ಶಿಫಾರಸು ಮಾಡುವುದೇ ಹೆಚ್ಚಾಗಿದೆ. ಈ ವೇಳೆಗೆ ರೋಗಿಗಳಿಗೆ ಸರ್ಕಾರಿ ಸೇವೆಯಲ್ಲಿರುವ ಆಂಬ್ಯುಲೆನ್ಸ್ ಆಸರೆಯಾಗುತ್ತದೆ. ಡಿಸೇಲ್ ವೆಚ್ಚವನ್ನು ರೋಗಿಗಳು ಭರಿಸಿದರೆ ಯಾವುದೇ ಆಸ್ಪತ್ರೆಗೂ ಸರ್ಕಾರಿ ಆಂಬ್ಯುಲೆನ್ಸ್‌ಗಳು ರೋಗಿಗಳನ್ನು ಕರೆದೊಯ್ಯಲಿವೆ. ಅದೇ ರೋಗಿಗಳು ಖಾಸಗಿ ವಾಹನ ಅಥವಾ ಖಾಸಗಿ ಆಂಬ್ಯುಲೆನ್ಸ್ ಮೊರೆ ಹೋದರೆ ಆರ್ಥಿಕ ಹೊರೆಯಾಗಲಿದೆ. ಇಲ್ಲಿನ ಸರ್ಕಾರಿ ಆಂಬ್ಯುಲೆನ್ಸ್ ದುರಸ್ಥಿಯಲ್ಲಿರುವುದರಿಂದ ಅನ್ಯಕಡೆ ತೆರಳುವ ರೋಗಿಗಳು ತುಂಬ ತೊಂದರೆ ಎದುರಿಸುವಂತಾಗಿದೆ.
ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ಇಲ್ಲ: ಆಂಬ್ಯುಲೆನ್ಸ್‌ಗಳ ದುರಸ್ತಿ ಕುರಿತು ಜಿಲ್ಲಾಸ್ಪತ್ರೆಯ ಮುಖ್ಯಸ್ಥರಿಗೂ ಗೊತ್ತಿದೆ. ಕೊಪ್ಪಳ ಮೆಡಿಕಲ್ ಕಾಲೇಜು ನಿರ್ದೇಶಕರಿಗೂ ಗೊತ್ತಿದೆ. ಆದರೆ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕರು ನಾವು ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಅನುದಾನ ಬಂದಾಗ ದುರಸ್ತಿ ಮಾಡಿಸುತ್ತೇವೆ ಎನ್ನುವ ಉತ್ತರ ನೀಡುತ್ತಿದ್ದಾರೆ. ಕಿಮ್ಸ್‌ನಿಂದಲೂ ಇದಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ. ದಿನದ 24 ಗಂಟೆಯೂ ಯಾವುದೇ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಜಿಲ್ಲಾಸ್ಪತ್ರೆಯಲ್ಲಿ ಸಿದ್ಧವಾಗಿರಬೇಕು. ಆದರೆ ಯಾವುದೇ ಆಂಬ್ಯುಲೆನ್ಸ್ ಇಲ್ಲದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಜಿಲ್ಲಾಸ್ಪತ್ರೆಗೆ ಪ್ರತಿನಿತ್ಯ 1000-1500 ರೋಗಿಗಳು ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವೇಳೆ ಕನಿಷ್ಟ 10 ಆಂಬ್ಯುಲೆನ್ಸ್ ಗಳಿದ್ದರೂ ಕಡಿಮೆಯೇ. ಇಷ್ಟೆಲ್ಲ ಗೊತ್ತಿದ್ದರೂ ವಾಹನದ ವ್ಯವಸ್ಥೆ ಸುಸಜ್ಜಿತವಾಗಿಟ್ಟುಕೊಳ್ಳಬೇಕು ಎನ್ನುವ ಕಾಳಜಿ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಖಾಸಗಿ ಆಂಬ್ಯುಲೆನ್ಸ್ ಲಾಭಿಯೇ? : ಜಿಲ್ಲಾಸ್ಪತ್ರೆಯ ಮುಂಭಾಗ ಹಾಗೂ ಒಳಾಂಗಣ ಆವರಣದಲ್ಲಿ ನಿತ್ಯವೂ ಖಾಸಗಿ ಆಂಬ್ಯುಲೆನ್ಸ್‌ಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಇಂತಹ ಖಾಸಗಿ ಆಂಬ್ಯುಲೆನ್ಸ್ ಲಾಬಿಗೆ ಜಿಲ್ಲಾಸ್ಪತ್ರೆ ಮಣಿದಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಬಡವರಿಗೆ ಸಕಾಲಕ್ಕೆ ಸೇವೆ ಕೊಡಬೇಕಾದ ಜಿಲ್ಲಾಸ್ಪತ್ರೆಯ ಮುಖ್ಯಸ್ಥರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ದುರಸ್ತಿ ಮಾಡಿಸದೇ ಇರುವುದು ರೋಗಿಗಳ ಆಕ್ರೋಶಕ್ಕೂ ಕಾರಣವಾಗಿದೆ.