ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ ಎಡವಟ್ಟಿನಿಂದ ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಗರ್ಭಿಣಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ, ಮೂರು ಕಾರು, ಎರಡು ಬೈಕ್‌ಗೆ ಹಾನಿಯಾಗಿದೆ.
ಘಟನೆ ಸಂಬಂಧ ಬಾಗಲಗುಂಟೆ ನಿವಾಸಿ ಸುಮಂತ್(23) ಎಂಬಾತನನ್ನು ಬಂಧಿಸಲಾಗಿದ್ದು, ಆ್ಯಂಬುಲೆನ್ಸ್ ಜಪ್ತಿ ಮಾಡಲಾಗಿದೆ.
ನಗರದ ಖಾಸಗಿ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್‌ನ ಚಾಲಕನಾಗಿ ಕೆಲಸ ಮಾಡುತ್ತಿರುವ ಸುಮಂತ್, ಶುಕ್ರವಾರ ರಾತ್ರಿ 10.45ರಲ್ಲಿ ಕೆ.ಆರ್.ಮಾರುಕಟ್ಟೆ ಕಡೆಯಿಂದ ಹೊಸಗುಡ್ಡದಹಳ್ಳಿ ಕಡೆ ಹೋಗುತ್ತಿದ್ದ. ಮಾರ್ಗ ಮಧ್ಯೆ ನಿಯಂತ್ರಣ ತಪ್ಪಿ ಸಿಗ್ನಲ್‌ನಲ್ಲಿ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಕಾರು ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದೆ. ಅಪಘಾತದ ವೇಳೆ ಕಾರಿನಲ್ಲಿದ್ದ 4 ತಿಂಗಳ ಗರ್ಭಿಣಿ ಹೊಟ್ಟೆಗೆ ಪೆಟ್ಟು ಬಿದ್ದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ. ಜತೆಗೆ ಮಗುವಿಗೂ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಸಂಚಾರ ಪೊಲೀಸರು ಹೇಳಿದರು.
ಬ್ರೇಕ್ ಬದಲು ಆ್ಯಕ್ಸಿಲೇಟರ್ ಒತ್ತಿದ್ದ ಚಾಲಕ: ಘಟನೆಯಿಂದ ಗಾಬರಿಗೊಂಡ ಚಾಲಕ ಬ್ರೇಕ್ ಬದಲು ಆ್ಯಕ್ಸಿಲೇಟರ್ ಒತ್ತಿದ್ದ ಪರಿಣಾಮ ಟಿಂಬರ್ ಯಾರ್ಡ್ ಕಡೆಯಿಂದ ಬರುತ್ತಿದ್ದ ಮತ್ತೂಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬಲಭಾಗದಲ್ಲಿದ್ದ ಬೈಕ್‌ಗೂ ಗುದ್ದಿದ್ದು, ಸವಾರನ ಕಾಲು ಮುರಿದಿದೆ. ಬಳಿಕ ಪಾರ್ಕಿಂಗ್ ಜಾಗದಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಆ್ಯಂಬುಲೆನ್ಸ್ ಚಾಲಕ ಕುಡಿದಿಲ್ಲ, ರೋಗಿಯೂ ಇರಲಿಲ್ಲ: ಘಟನೆ ಸಂಭವಿಸಿದ್ದಾಗ ಆ್ಯಂಬುಲೆನ್ಸ್‌ನಲ್ಲಿ ರೋಗಿ ಯಾರು ಇರಲಿಲ್ಲ. ಹೊಸಗುಡ್ಡದಹಳ್ಳಿ ಕಡೆ ರೋಗಿಯೊಬ್ಬರ ಕಡೆಯಿಂದ ಬಂದಿದ್ದ ಕರೆ ಸಂಬಂಧ ಆ ಕಡೆ ಅತಿವೇಗವಾಗಿ ಹೋಗುತ್ತಿದ್ದಾಗಿ ಚಾಲಕ ಹೇಳಿಕೆ ನೀಡಿದ್ದಾನೆ. ಆ್ಯಂಬುಲೆನ್ಸ್ ಜಪ್ತಿ ಮಾಡಿ ನಂತರ ಸುಮಂತ್‌ನನ್ನು ಠಾಣೆಗೆ ಕರೆದುಕೊಂಡು ಬಂದು ಮದ್ಯಪಾನ ತಪಾಸಣೆ ನಡೆಸಲಾಗಿದ್ದು, ಆತ ಮದ್ಯ ಸೇವಿಸಿರುವುದು ಕಂಡು ಬಂದಿಲ್ಲ. ಸದ್ಯ ಆರೋಪಿಯನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.