ಹಳ್ಳಿಯಿಂದ ಕನಸು ಕಟ್ಟಿಕೊಂಡು ಸಿಟಿಗೆ ಬರುವ ಹೆಣ್ಣು ಮಕ್ಕಳು ಕೊಲೆಯಾಗುತ್ತಿರುತ್ತಾರೆ. ಆದರೆ, ಯಾವುದೇ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗುವುದಿಲ್ಲ. ಅದಕ್ಕೆ ಕಾರಣ ಅದರ ಹಿಂದಿರುವ ಜಾಲ. ಅಷ್ಟಕ್ಕೂ ಆ ಜಾಲ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಅಂಬುಜ’ ಸಿನಿಮಾ ನೋಡಬಹುದು.
ಈ ವಾರ ತೆರೆಕಂಡಿರುವ “ಅಂಬುಜ’ ಒಂದು ಹೊಸ ವಿಷಯವನ್ನಿಟ್ಟುಕೊಂಡು ಬಂದಿರುವ ಸಿನಿಮಾ. ಕಂಟೆಂಟ್ ಸಿನಿಮಾಗಳು ಸದ್ದು ಮಾಡುತ್ತಿರುವ ಸಮಯದಲ್ಲಿ “ಅಂಬುಜ’ದಲ್ಲೂ ಒಂದು ಗಟ್ಟಿ ಕಂಟೆಂಟ್ ಇದೆ. ನಿರ್ದೇಶಕ ಶ್ರೀನಿ ಫ್ಯಾಮಿಲಿ ಡ್ರಾಮಾ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಒಂದು ನೀಟಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಕ್ರೈಮ್ ರಿಪೋರ್ಟರ್‌ವೊಬ್ಬರ ತನಿಖೆ ಹಾಗೂ ಸಂದೇಹದೊಂದಿಗೆ ತೆರೆದುಕೊಳ್ಳುವ ಸಿನಿಮಾ ಮುಂದೆ ಹಲವು ಆಯಾಮಗಳೊಂದಿಗೆ ಸಾಗುತ್ತದೆ. ಇದು ಥ್ರಿಲ್ಲರ್ ಜಾನರ್ ಆದರೂ, ಅಲ್ಲಲ್ಲಿ ಫ್ಯಾಮಿಲಿ ಡ್ರಾಮಾಕ್ಕೂ ಅವಕಾಶವಿದೆ.
ಬಹುತೇಕ ಸಿನಿಮಾಗಳ ಮೊದಲರ್ಧ ಪಾತ್ರ ಪರಿಚಯ, ಕಾಮಿಡಿ, ಸೆಂಟಿಮೆಂಟ್ ದೃಶ್ಯಗಳ ಮೂಲಕ ಮೂಲಕಥೆಗೆ ಬರುತ್ತವೆ. ಆದರೆ, “ಅಂಬುಜ’ ಸಿನಿಮಾ ಆರಂಭವಾದಗಿನಿಂದಲೂ ಚಿತ್ರದೊಳಗಿನ ಸಸ್ಪೆನ್ಸ್‌ವೊಂದನ್ನು ಪ್ರೇಕ್ಷಕರ ಮಡಿಲಿಗೆ ಹಾಕಿಯೇ ಸಿನಿಮಾ ಮುಂದೆ ಸಾಗುತ್ತದೆ. ಸಿನಿಮಾದ ಮೂಲಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧ ದಲ್ಲಿ. ಇಲ್ಲಿ ಕಥೆಗೆ ಹೊಸ ಆಯಾಮ ಸಿಗುವ ಜೊತೆಗೆ ಮುಖವಾಡಗಳು ಬಯಲಾಗುತ್ತಾ ಹೋಗುತ್ತದೆ.
ಈ ಸಿನಿಮಾದ ಪ್ರಮುಖ ಹೈಲೈಟ್ಸ್ ಕ್ಲೈಮ್ಯಾಕ್ಸ್. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಚಿತ್ರತಂಡ ಅದ್ಭುತವಾಗಿ ಚಿತ್ರೀಕರಿಸಿದೆ. ಆ ಮಟ್ಟಿಗೆ “ಅಂಬುಜ’ ಪ್ರಯತ್ನವನ್ನು ಮೆಚ್ಚಬಹುದು. ನಿರ್ಮಾಪಕ ಕಾಶೀನಾಥ್ ಈ ಚಿತ್ರದ ಕಥೆಗಾರ. ಒಂದೊಳ್ಳೆಯ ಕಥೆಯನ್ನು ಕೊಟ್ಟಿರುವ ಜೊತೆಗೆ ನಿರ್ಮಾಣದಲ್ಲೂ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಶುಭಾ ಪೂಂಜಾ, ದೀಪಕ್ ಸುಬ್ರಮಣ್ಯ, ರಜಿನಿ, ಬೇಬಿ ಆಕಾಂಕ್ಷ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪತ್ರಕರ್ತೆಯಾಗಿ ಶುಭಾ ಪೂಂಜಾ, ಲಂಬಾಣಿ ಜನಾಂಗದ ಹೆಣ್ಣಾಗಿ ರಜಿನಿ ನಟಿಸಿದರೆ, ಬಾಲನಟಿಯಾಗಿ ನಟಿಸಿರುವ ಆಕಾಂಕ್ಷ ಗಮನ ಸೆಳೆಯುತ್ತಾರೆ. ಚಿತ್ರದ ಹಾಡುಗಳು ಸನ್ನಿವೇಶಕ್ಕೆ ಪೂರಕವಾಗಿವೆ.
ರವಿ ರೈ