ರೇಸ್ ಪ್ರಿಯರಾಗಿದ್ದ ಅಂಬರೀಶ್, ಬೆಂಗಳೂರು ಟರ್ಫ್ ಕ್ಲಬ್‌ನ ಸದಸ್ಯರೂ ಹೌದು. ಹತ್ತಾರು ವರ್ಷಗಳ ಹಿಂದೆಯೇ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಎರಡು ಕುದುರೆಗಳನ್ನು ಅವರು ಸಾಕಿದ್ದರು. ಪ್ರತಿ ವರ್ಷ ನಡೆಯುವ ಬೆಂಗಳೂರು ಡರ್ಬಿ ರೇಸ್‌ಗೆ ತಪ್ಪದೇ ಹಾಜರಾಗುತ್ತಿದ್ದರು. ತಮ್ಮ ಕುದುರೆಗಳ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದ ಅವರು ಅವನ್ನೂ ತಮ್ಮ ಮನೆಯ ಸದಸ್ಯರಂತೆ ಪರಿಗಣಿಸುತ್ತಿದ್ದರು.
ಅವು ನೆನಪಾದಾಗ, ಮಧ್ಯರಾತ್ರಿಯಾದರೂ ಸರಿ ಹೋಗಿ ನೋಡಿಕೊಂಡು ಬರುತ್ತಿದ್ದರು. ಅವರ ಮನೆಗೆ ಬರುವ ಆಪ್ತ ಗೆಳೆಯರನ್ನು ಬನ್ನಿ ನಮ್ಮ ಕುದುರೆಗಳನ್ನು ನೋಡಿ ಎಂದು ಕರೆದುಕೊಂಡು ಹೋಗಿ ಅಭಿಮಾನದಿಂದ ತೋರಿಸುತ್ತಿದ್ದರು. ಒಂದೊಮ್ಮೆ ತಮ್ಮ ಆಪ್ತ ಸ್ನೇಹಿತರೊಬ್ಬರನ್ನು ರಾತ್ರಿ ಊಟಕ್ಕೆ ಮನೆಗೆ ಆಹ್ವಾನಿಸಿದ್ದ ಅಂಬಿ,
ಅವರು ಇನ್ನೇನು ಹೊರಡುವಾಗ, “ನಮ್ಮ ಕುದುರೆಗಳನ್ನು ಪರಿಚಯಿಸುವುದನ್ನು ಮರೆತಿದ್ದೆ. ಬನ್ನಿ ಅವುಗಳನ್ನು ಮಾತನಾಡಿಸಿಕೊಂಡು ಬರೋಣ ಪ್ಲೀಸ್” ಎಂದು ಅವರನ್ನು ತಮ್ಮ ಕಾರಿನಲ್ಲೇ ರೇಸ್‌ಕೋರ್ಸ್‌ಗೆ ಕರೆದೊಯ್ದು ಕುದುರೆಗಳನ್ನು ತೋರಿಸಿ ಅವುಗಳ ಪರಿಚಯ ಮಾಡಿಸಿ ಆನಂತರ ಅವರನ್ನು ಮನೆಗೆ ಕಳುಹಿಸಿದ್ದರಂತೆ!
ಅಣ್ಣ ಸತ್ತ ವರ್ಷಕ್ಕೆ ಅಂಬಿ ಸಾವು: ನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಹಿರಿಯ ಸಹೋದರ ಡಾ.ಹರೀಶ್ (69) ಸಾವನ್ನಪ್ಪಿ ನಿನ್ನೆಗೆ ಒಂದು ವರ್ಷ. ಅಣ್ಣ ಸತ್ತ ಒಂದು ವರ್ಷಕ್ಕೆ ಅಂಬರೀಶ್ ವಿಧಿವಶರಾಗಿದ್ದಾರೆ. ಡಾ.ಹರೀಶ್ ಅವರು 24 ನವೆಂಬರ್ 2017ರಂದು ಮೃತಪಟ್ಟಿದ್ದರು.
1948ರಲ್ಲಿ ಜನಿಸಿದ್ದ ಡಾ.ಹರೀಶ್ 35 ವರ್ಷಗಳಿಂದ ದೊಡ್ಡರಸಿನಕೆರೆ ಸಮೀಪದ ಕೆ.ಎಂ.ದೊಡ್ಡಿಯಲ್ಲಿ ತಮ್ಮದೇ ಸ್ವಂತ ಕ್ಲಿನಿಕ್ ಹೊಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು 2017ರ ನವೆಂಬರ್ 24ರಂದು ಮೈಸೂರಿನ ನಿವಾಸದಲ್ಲಿ ಮೃತಪಟ್ಟಿದ್ದರು.
ಮಂಡ್ಯ ಮಣ್ಣಲ್ಲೇ ಅಂತ್ಯಕ್ರಿಯೆಗೆ ಅಭಿಮಾನಿಗಳ ಆಗ್ರಹ: ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಮಂಡ್ಯದ ಮಣ್ಣಿನಲ್ಲಿಯೇ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ರಾತ್ರಿಯಿಂದಲೇ ಅಭಿಯಾನ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಅಂಬಿ ಕುಟುಂಬದವರಿಗೆ ತಲುಪುವವರೆಗೂ ಈ ಸಂದೇಶವನ್ನು ರವಾನೆ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಮಂಡ್ಯವನ್ನು ಬಹುವಾಗಿ ಪ್ರೀತಿಸುತ್ತಿದ್ದ ಅಂಬರೀಷ್ ನಾನು ಮಂಡ್ಯದವನು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಹೆಮ್ಮೆ , ಅಭಿಮಾನದ ಪ್ರತೀಕವಾಗಿ ಅಂಬರೀಶ್ ಈ ನೆಲದಲ್ಲಿಯೇ ಇರಬೇಕು ಎಂಬುದು ಅಭಿಮಾನಿಗಳ ಪ್ರೀತಿಯ ಒತ್ತಾಯವಾಗಿದೆ. ಆದ್ದರಿಂದ ಅಂಬಿಯ ಅಂತ್ಯಸಂಸ್ಕಾರ ಮಂಡ್ಯದ ನೆಲದಲ್ಲಿಯೇ ಆಗಬೇಕೆಂಬುದು ಅಭಿಮಾನಿಗಳ ಆಗ್ರಹ.