Advertisement

ಚಿತ್ರೋದ್ಯಮದಿಂದ ಅಂಬಿ ನಮನ

11:30 AM Dec 01, 2018 | |

ಕನ್ನಡ ಚಿತ್ರರಂಗದ ಆಪತ್ಬಾಂದವ, ಅಭಿಮಾನಿಗಳ ಆರಾಧ್ಯ ದೈವ, ಸ್ನೇಹಿತರ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌ ಅಂಬರೀಶ್‌ ನಮ್ಮಿಂದ ದೂರವಾಗಿದ್ದಾರೆಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲು ಇನ್ನೂ ಮನಸ್ಸು ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಅಂಬರೀಶ್‌ ಎಲ್ಲರೊಂದಿಗೆ ಬೆರೆತ ರೀತಿ, ತೋರಿದ  ಆತ್ಮೀಯತೆ. ಕನ್ನಡ ಚಿತ್ರರಂಗದ ಏನೇ ಸಮಸ್ಯೆ ಇದ್ದರೂ ತಕ್ಷಣ ಸ್ಪಂಧಿಸುತ್ತಿದ್ದ ಅಂಬರೀಶ್‌ ಅವರಿಗೆ ಚಿತ್ರರಂಗ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದೆ.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರೋದ್ಯಮದ ಪರವಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅಂಬರೀಶ್‌ ಅವರ ವ್ಯಕ್ತಿತ್ವವನ್ನು ಅನೇಕರು ಬಣ್ಣಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕರು ಸೇರಿದ್ದ ಈ ಸಭೆಯಲ್ಲಿ ಸುಮಲತಾ ಅಂಬರೀಶ್‌ ಕೂಡ ತಮ್ಮ ಪತಿ ಬದುಕಿದ ರೀತಿ, ಜನ ತೋರಿದ ಪ್ರೀತಿಯನ್ನು ನೆನೆಯುತ್ತಲೇ ಭಾವುಕರಾದರು.

ರಾಜನಂತೆ ಬದುಕಿದ ಅಂಬಿಯನ್ನು ರಾಜನಂತೆ ಕಳುಹಿಸಿಕೊಟ್ಟ ಸರ್ಕಾರ, ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೆ ಕೈ ಮುಗಿದು ನಮಸ್ಕರಿಸಿದ ಸುಮಲತಾ ಅಂಬರೀಶ್‌, ಅಂಬರೀಶ್‌ಗೆ ತೋರಿದ ಪ್ರೀತಿಯನ್ನು ಮಗ ಅಭಿಷೇಕ್‌ಗೂ ತೋರಿ ಎನ್ನುತ್ತಾ ಭಾವುಕರಾದರು. “ಅಂಬಿ ನಮನ’ ಶ್ರದ್ಧಾಂಜಲಿ ಸಭೆಯಲ್ಲಿ ಹೊರಹೊಮ್ಮಿದ ಭಾವುಕ ಮಾತುಗಳು ಇಲ್ಲಿವೆ ….

ಅರಸನಾಗಿ ಬದುಕಿ ಅರಸನಾಗಿಯೇ ಹೋದ್ರು: ಅಂಬರೀಶ್‌ ಅವರ ನಿಧನದ ನಂತರ ಸುಮಲತಾ ಅಂಬರೀಶ್‌ ಅವರು ಮೊದಲ ಬಾರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಮಡುಗಟ್ಟಿದ ನೋವಿನಲ್ಲೇ ತಮ್ಮ ಪತಿಯನ್ನು ಬೆಳೆಸಿದ,ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು. ಭಗವದ್ಗೀತೆಯ ಅಂಶಗಳನ್ನು ಉಲ್ಲೇಖೀಸುತ್ತಲೇ ಸುಮಲತಾ ಅವರು ಮಾತಿಗಿಳಿದರು.

ಅದು ಅವರ ಮಾತುಗಳಲ್ಲೇ -“ಭಗವದ್ಗೀತೆಯಲ್ಲಿ ಬರೆದಿದೆಯಂತೆ, ಬರುವಾಗ ಏನ್‌ ತಗೊಂಡು ಬರಿಯಾ, ಇಲ್ಲಿಂದ ಹೋಗುವಾಗ ಏನ್‌ ತಗೊಂಡ್‌ ಹೋಗ್ತಿಯ, ಇಲ್ಲಿ ಯಾವುದು ಶಾಶ್ವತ ಅಲ್ಲ ಎಂದು ದೇವರು ಮನುಷ್ಯನೊಬ್ಬನಿಗೆ ಹೇಳುತ್ತಾರಂತೆ. ಆಗ ಆ ಮನುಷ್ಯ, “ನೀನು ನನ್ನನ್ನು ಇಲ್ಲಿ ಕಳುಹಿಸುವಾಗ ಒಂದೇ ಹೃದಯ ಕೊಟ್ಟು ಕಳುಹಿಸಿದ್ದೀಯ. ಆದರೆ ನಾನು ಇಲ್ಲಿಂದ ಹೋಗುವಾಗ ಲಕ್ಷಾಂತರ ಜನರ ಹೃದಯದಲ್ಲಿ ಮನೆ ಮಾಡಿಕೊಂಡು ನಾನು ಶಾಶ್ವತವಾಗಿ ಇಲ್ಲೇ ಇರುತ್ತೇನೆ.

Advertisement

ನೀನು ನನ್ನ ಕರೆದುಕೊಂಡು ಹೋಗಬಹುದು, ಆದರೆ ನನ್ನ ಹೃದಯ, ಮನೆ ಇಲ್ಲೇ ಇರುತ್ತೆ ಎಂದು ನಕ್ಕುಬಿಟ್ಟು ಆ ಮನುಷ್ಯ ಹೇಳುತ್ತಾನಂತೆ … ಅಂಬರೀಶ್‌ ಅಂತಹ ಒಂದು ಮನುಷ್ಯರಾಗಿದ್ದರು. ನಮ್ಮ-ನಿಮ್ಮ ಅಂಬರೀಶ್‌ ಅವರ ಪ್ರಯಾಣದ ಬಗ್ಗೆ ನನಗಿಂತ ನಿಮಗೆ ಹೆಚ್ಚು ಗೊತ್ತಿದೆ. ಅವರನ್ನು ನನಗಿಂತ ಹೆಚ್ಚು ಹತ್ತಿರದಿಂದ ನೋಡಿದವರು ಇದ್ದೀರಿ. ನಾನು 27 ವರ್ಷಗಳಲ್ಲಿ ನೋಡಿದ್ದನ್ನಷ್ಟೇ ಹೇಳಬಲ್ಲೆ. ನನಗೆ ಅಂಬರೀಶ್‌ ಸ್ನೇಹಿತ ಅಂತ ಹೇಳಲಾ, ಗಂಡ ಅಂತ ಹೇಳಲಾ, ಲೈಫ್ ಪಾರ್ಟರ್‌ ಅಂತ ಹೇಳಲಾ …  

ನನಗೆ ತಂದೆಯಾಗಿ, ಅಣ್ಣನಾಗಿಯೂ ಇದ್ದರು. ನನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಅವರು ಎಲ್ಲೇ ಇದ್ದರೂ ನಗುನಗುತ್ತಾ ಆಶೀರ್ವಾದ ಮಾಡ್ತಾ ಇರ್ತಾರೆ. ಅವರ ಬಗ್ಗೆ ಹೇಳಲು ಯಾವ ಪದ ಹುಡುಕಲಿ, ನಾನು ನೋಡಿರುವ ಅಂಬರೀಶ್‌, ಒಳ್ಳೇ ಮಗನಾಗಿದ್ರು, ಒಳ್ಳೆ ಗಂಡನಾಗಿದ್ರು, ಒಳ್ಳೆ ತಂದೆಯಾಗಿದ್ರು, ಒಳ್ಳೆಯ ಸ್ನೇಹಿತನಾಗಿದ್ರು, ಒಳ್ಳೆ ನಟ, ರಾಜಕೀಯ ನಾಯಕ, ಒಳ್ಳೇ ಸಮಾಜ ಸೇವಕ, ಕ್ರೀಡೆಯಲ್ಲಿ ಆಸಕ್ತಿ ಇದ್ದ ವ್ಯಕ್ತಿ … ಹೀಗೆ ವಿಭಿನ್ನ ವ್ಯಕ್ತಿತ್ವ ಇದ್ದ ವ್ಯಕ್ತಿಯಾಗಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯನಾಗಿದ್ರು, ಮನುಷ್ಯನಾಗಿಯೇ ಉಳಿದು ಮನುಷ್ಯನಾಗಿಯೇ ಹೋದರು, ರಾಜನಾಗಿ ಬಾಳಿ ರಾಜನಾಗಿಯೇ ಹೋದರು. ಅವರ ಅಂತಿಮ ಪಯಣದಲ್ಲಿ ಅರಸನಾಗಿಯೇ ಕಳುಹಿಸಿಕೊಟ್ಟಿದ್ದೀರ. ಮುಖ್ಯಮಂತ್ರಿ ಕುಮಾರಣ್ಣ ಸರಿಯಾದ ಸಮಯಕ್ಕೆ ನಿರ್ಧಾರ ತಗೊಂಡು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದರು.ಅದಕ್ಕೆ ನಾನು ಸರ್ಕಾರ, ಅಭಿಮಾನಿಗಳು ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.

ಮಾಧ್ಯಮದವರನ್ನು ಅವರು “ಸುಂದರ’ ಭಾಷೆಯಿಂದ ಸಂಭೋದಿಸುತ್ತಿದ್ದರೂ ಅದನ್ನು ಕ್ರೀಡಾಮನೋಭಾವದಿಂದ ತಗೊಂಡು, ಅವರನ್ನು ಪ್ರೀತಿಸುತ್ತಿದ್ದ ಮಾಧ್ಯಮದವರಿಗೂ ನಾನು ಧನ್ಯವಾದ ಹೇಳುತ್ತೇನೆ. ಜೊತೆಗೆ ಅವರಿಗೆ ಅನ್ನದಾತರಾದ ನಿರ್ಮಾಪಕರು, ವಿಭಿನ್ನ ಪಾತ್ರ ಕೊಟ್ಟು ಜನರ ಮನಸ್ಸಲ್ಲಿ ಉಳಿಯುವಂತೆ ಮಾಡಿದ ನಿರ್ದೇಶಕರಿಗೆ, ತಾಂತ್ರಿಕ ವರ್ಗಕ್ಕೂ ನನ್ನ ನಮನ.

ಅಂಬಿ ಕೊನೆಯ ಆಸೆ ಈಡೇರಲಿಲ್ಲ: ಅಂಬರೀಶ್‌ ಅವರ ಕೊನೆಯ ಆಸೆಯ ಬಗ್ಗೆಯೂ ಸುಮಲತಾ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. “ಅಂಬರೀಶ್‌ ಅವರಿಗೆ ಒಂದು ಆಸೆ ಇತ್ತು. ಅದು ಅಭಿಷೇಕ್‌ನ ಮೊದಲ ಸಿನಿಮಾವನ್ನು ನೋಡಬೇಕೆಂಬುದು. ಆದರೆ ಅದು ಈಡೇರಲೇ ಇಲ್ಲ. ಅಭಿಷೇಕ್‌ ಮೇಲೂ ನಿಮ್ಮ ಆಶೀರ್ವಾದ ಇರಲಿ’ ಎನ್ನುತ್ತಾ ಭಾವುಕರಾದರು. 

Advertisement

Udayavani is now on Telegram. Click here to join our channel and stay updated with the latest news.

Next