ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ “ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ’ಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಸರ್ಕಾರದ ಪರ ವಕೀಲರು ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ 2019ರ ಡಿ.13ರಂದು ಆದೇಶ ಹೊರಡಿಸಲಾಗಿದೆ. ತನಿಖೆ ಮುಂದು ವರಿದಿದೆ ಎಂದು ನ್ಯಾಯಪೀಠ ತಿಳಿಸಿದರು.
ಆಗ, ಹಾಗಿದ್ದರೆ ಸಂಬಂಧಪಟ್ಟ ತನಿಖಾಧಿಕಾರಿಗೆ ಈವರೆಗಿನ ತನಿಖಾ ವರದಿಯನ್ನು ಫೆ.29ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲು ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿದರು.
ಸಿಐಡಿಗೆ ವಹಿಸಲು ಪ್ರಮುಖ ಕಾರಣ: ಆ್ಯಂಬಿಡೆಂಟ್ ಹಾಗೂ ಅದರ ಸಮೂಹ ಸಂಸ್ಥೆಗಳು ಹೂಡಿಕೆದಾರರಿಗೆ ಕೋಟ್ಯಂತರ ರೂ. ವಂಚಿಸಿದ್ದಾರೆ. ಈ ಕುರಿತು 2018ರ ನ.28ರಂದು ಸಿಸಿಬಿಯ ಆಗಿನ ಎಸಿಪಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅದರಂತೆ, ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು, ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ 2018ರ ಡಿ.20 ಹಾಗೂ 2019ರ ಜೂ.6ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.