Advertisement
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸದೇ ಇದ್ದರೂ ಜಿಲ್ಲಾ ಕಾಂಗ್ರೆಸ್‌ನ ನಾಯಕತ್ವವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಹರಸಾಹಸಕ್ಕೆ ಮುಂದಾಗಿರುವ ಅಂಬರೀಶ್ ಈಗ ಟಿಕೆಟ್ ರಾಜಕಾರಣದತ್ತ ಮುಖ ಮಾಡಿದ್ದಾರೆ.
Related Articles
Advertisement
ಕಾಂಗ್ರೆಸ್ ಸಮಿತಿ ಅಂತಿಮ: ಕಾಂಗ್ರೆಸ್ ಸಮಿತಿಯು ಮಳವಳ್ಳಿಯಿಂದ ಪಿ.ಎಂ.ನರೇಂದ್ರಸ್ವಾಮಿ, ಶ್ರೀರಂಗಪಟ್ಟಣ ಕ್ಷೇತ್ರದಿಂದ ರಮೇಶ್ ಬಂಡಿಸಿದ್ದೇಗೌಡ, ನಾಗಮಂಗಲ ಕ್ಷೇತ್ರದಿಂದ ಚೆಲುವರಾಯಸ್ವಾಮಿ, ಕೆ.ಆರ್.ಪೇಟೆ ಕ್ಷೇತ್ರದಿಂದ ಕೆ.ಬಿ.ಚಂದ್ರಶೇಖರ್ ಹೆಸರು ಬಹುತೇಕ ಅಂತಿಮಗೊಂಡಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್‌ರನ್ನು ಬೆಂಬಲಿಸಲು ನಿರ್ಧರಿಸಿರುವ ಕಾಂಗ್ರೆಸ್, ಮದ್ದೂರು ಕ್ಷೇತ್ರದಿಂದ ಕಲ್ಪನಾ ಸಿದ್ದರಾಜು ಅಥವಾ ಮಧು ಜಿ. ಮಾದೇಗೌಡರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಹೀಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿರುವ ಕಾಂಗ್ರೆಸ್, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಂಬರೀಶ್‌ರನ್ನು ಕಣಕ್ಕಿಳಿಸುವ ಉತ್ಸಾಹದಲ್ಲಿದೆ. ಒಂದು ವೇಳೆ ಅಂಬರೀಶ್ ಅನಾರೋಗ್ಯದ ಕಾರಣವನ್ನು ಮುಂದಿಟ್ಟರೆ ಸುಮಲತಾ ಅವರಿಗೆ ಟಿಕೆಟ್ ನೀಡುವುದಕ್ಕೂ ಪಕ್ಷ ಸಿದ್ಧವಿದೆ. ಆದರೆ, ಅಂಬರೀಶ್ ಇದುವರೆಗೆ ತಮ್ಮ ರಾಜಕೀಯ ನಡೆಯನ್ನು ಸ್ಪಷ್ಟಪಡಿಸುತ್ತಿಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಪ್ರಾಬಲ್ಯ ಸೀಮಿತ: ಕಳೆದ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸಂದರ್ಭ ತಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಂಡಂತೆ ಈ ಬಾರಿಯೂ ಪಕ್ಷದ ಹೈಕಮಾಂಡ್ ಶಾಸಕ ಅಂಬರೀಶ್ ಅವರಿಗೆ ಮಣೆ ಹಾಕುವ ಗೋಜಿಗೆ ಹೋಗಿಲ್ಲ. ಬಹುತೇಕ ಎಲ್ಲ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮಂಡ್ಯ ಕ್ಷೇತ್ರದ ಟಿಕೆಟ್‌ಗಷ್ಟೇ ಅಂಬರೀಶ್ ಪ್ರಾಬಲ್ಯವನ್ನು ಸೀಮಿತಗೊಳಿಸಿದ್ದಾರೆ. ಇತ್ತೀಚೆಗೆ ಅಂಬರೀಶ್‌ರನ್ನು ಭೇಟಿ ಮಾಡಿದ ಅಭಿಮಾನಿಗಳಿಗೂ ಅಂಬರೀಶ್ ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸದೆ ಪಕ್ಷದ ವರಿಷ್ಠರ ಮೇಲಿನ ಅಸಮಾಧಾನವನ್ನೇ ಬಹಿರಂಗಪಡಿಸಿದ್ದಾರೆ. ಒಟ್ಟಾರೆಯಾಗಿ ಶಾಸಕ ಅಂಬರೀಶ್ ಈ ಚುನಾವಣೆಯಲ್ಲಿ ಟಿಕೆಟ್ ರಾಜಕಾರಣದ ಮೂಲಕ ತಮ್ಮ ಪ್ರಾಬಲ್ಯವನ್ನು
ಹೆಚ್ಚಿಸಿಕೊಳ್ಳುವ ಪ್ರಯತ್ನ ಒಂದೆಡೆಯಾದರೆ, ಕಾಂಗ್ರೆಸ್ ಒಳಗಿನ ಇತರೆ ಪ್ರಭಾವಿ ನಾಯಕರನ್ನು ಜೆಡಿಎಸ್ ಸಹಕಾರದೊಂದಿಗೆ ಮಟ್ಟ ಹಾಕುವ ತಂತ್ರಗಾರಿಕೆಯನ್ನು ನಡೆಸಿದ್ದಾರೆ. ಒಕ್ಕಲಿಗ ನಾಯಕತ್ವದ ಇಮೇಜ್‌ನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆದರಿಸುವ ಜಾಣ್ಮೆಯನ್ನು ಪ್ರದರ್ಶಿಸುತ್ತಿರುವ ಅಂಬರೀಶ್ ರಾಜಕೀಯ ಚದುರಂಗದ ಆಟಕ್ಕೆ ಯಾವ ಫಲಿತಾಂಶ ದೊರೆಯುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಅಂಬಿ ಅಪಸ್ವರ
ಮೇಲುಕೋಟೆ ಕ್ಷೇತ್ರದಲ್ಲಿ ಪುಟ್ಟಣ್ಣಯ್ಯ ಪುತ್ರ ದರ್ಶನ್‌ಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆಂಬ ಅಪಸ್ವರ ಎತ್ತಿರುವ ಅಂಬರೀಶ್, ಅಲ್ಲಿಂದ ಕಳೆದ ಬಾರಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವ ತನ್ನ ಶಿಷ್ಯ ಎಲ್.ಡಿ.ರವಿ ಅವರಿಗೆ ಮತ್ತೂಮ್ಮೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮಧು ಜಿ.ಮಾದೇಗೌಡ, ಕೆ.ಆರ್.ಪೇಟೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಪರಾಜಿತ ಅಭ್ಯರ್ಥಿ ಕಿಕ್ಕೇರಿ ಸುರೇಶ್‌ಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತಗ್ಗಿದ ಆರ್ಭಟ
ಈಗಾಗಲೇ ಮಾಜಿ ಸಂಸದೆ ರಮ್ಯಾ ರಾಜಕೀಯ ಪ್ರಭಾವದಿಂದ ಕೊಂಚ ಕುಸಿದಿರುವ ಅಂಬರೀಶ್, ಮಾಜಿ ಸಚಿವ ಚೆಲುವರಾಯಸ್ವಾಮಿ ಕಾಂಗ್ರೆಸ್ ಪ್ರವೇಶ ಕೂಡ ಅಂಬರೀಶ್ ರಾಜಕೀಯ ಆರ್ಭಟವನ್ನು ತಗ್ಗಿಸಿದೆ. ಈ ನಡುವೆ
ಪಕ್ಷದ ಹೈಕಮಾಂಡ್ ಕೂಡ ಅಂಬರೀಶ್‌ರನ್ನು ಟಿಕೆಟ್ ಹಂಚಿಕೆ ವಿಚಾರದಲ್ಲಿ ಪ್ರಮುಖವಾಗಿ ಪರಿಗಣಿಸಲಿಲ್ಲವೆಂಬುದು ಅಂಬರೀಶ್ ಅಸಮಾಧಾನಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ನಿರ್ದೇಶನದ ಮೇರೆಗೆ ಕೆಲವೊಂದು ತೀರ್ಮಾನಗಳನ್ನು ಅಂಬರೀಶ್ ತೆಗೆದುಕೊಳ್ಳುತ್ತಾರೆಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್‌ನ ಪ್ರಭಾವಿ ನಾಯಕರಾದ ಪುಟ್ಟರಾಜು ಮತ್ತು ತಮ್ಮಣ್ಣ ಗೆಲುವಿಗೆ ಅಂಬರೀಶ್ ಅವರಿಂದ ಸಹಕಾರ ಪಡೆಯುವ ಪ್ರಯತ್ನಗಳು ಜೆಡಿಎಸ್‌ನಲ್ಲಿ ನಡೆದಿವೆ ಎಂದು ಹೇಳಲಾಗುತ್ತಿದೆ. ತಿರಸ್ಕರಿಸುವ ಶಕ್ತಿ ಇಲ್ಲ ಕಾಂಗ್ರೆಸ್ ಹೈಕಮಾಂಡ್ ಅಂಬರೀಶ್‌ರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೂ ಎಲ್ಲವನ್ನೂ ತಿರಸ್ಕರಿಸುವ ಶಕ್ತಿ ಇಲ್ಲ. ಒಕ್ಕಲಿಗ ನಾಯಕತ್ವದ ಲೇಬಲ್‌ನಲ್ಲಿ ಗುರುತಿಸಿಕೊಂಡಿರುವ ಅಂಬರೀಶ್‌ರನ್ನು ಕಾಂಗ್ರೆಸ್ ಸಂಪೂರ್ಣ ತಿರಸ್ಕರಿಸಿದರೆ ಒಕ್ಕಲಿಗ ಮತಗಳು ಕಾಂಗ್ರೆಸ್‌ನಿಂದ ಚದುರಿ ಹೋಗುತ್ತವೆ ಎಂಬ ಭೀತಿ ಒಂದೆಡೆಯಾದರೆ, ವಿಶೇಷವಾಗಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವಿಗೆ ಕನಿಷ್ಟ ಸಹಾಯಕ್ಕಾಗಿಯಾದರೂ ಸೆರಗಿನ ಕೆಂಡವಾದ ಅಂಬರೀಶ್‌ರನ್ನು ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಜಾಣ್ಮೆಯ ನಡೆ
ಅತ್ಯಂತ ಜಾಣ್ಮೆಯಿಂದ ಅಂಬರೀಶ್‌ರನ್ನು ನಿಭಾಯಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ ಕ್ಷೇತ್ರದ ಟಿಕೆಟ್‌ನ್ನು ಅಂಬರೀಶ್ ಇಚ್ಛೆಗೆ ಅನುಗುಣವಾಗಿ ಘೋಷಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಶಾಸಕ ಅಂಬರೀಶ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸದೇ ಇದ್ದರೂ ಅವರಿಗೆ ಟಿಕೆಟ್ ಸಿಗುವುದು ಖಚಿತ. ಒಂದು ವೇಳೆ ಅನಾರೋಗ್ಯದ ಕಾರಣಕ್ಕಾಗಿ ಸ್ಪರ್ಧೆ ನಿರಾಕರಿಸಿದರೆ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ಮತ್ತು ಪಕ್ಷದ ಆರ್ಥಿಕ ನೆರವು ದೊರೆಯಲಿದೆ. ಮಂಡ್ಯ ಮಂಜುನಾಥ್