Advertisement
ಸುದೀಪ್ ಈ ಚಿತ್ರದ ನಿಜವಾದ ಬ್ಯಾಕ್ ಬೋನ್: ಅಂಬರೀಶ್ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರ ಮೂಡಿಬಂದಿರುವ ರೀತಿ. ಇತ್ತೀಚೆಗೆ ಅಂಬರೀಶ್ ಅವರು ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದು, ಆ ಸಂದರ್ಭದಲ್ಲಿ ಚಿತ್ರ ನೋಡಿ ಖುಷಿಯಾಗಿದ್ದಾರೆ. ಅದರಲ್ಲೂ ಸುದೀಪ್ ಅವರ ಬಗ್ಗೆ ಸ್ವಲ್ಪ ಜಾಸ್ತಿಯೇ ಖುಷಿಯಿಂದ ಮಾತನಾಡುತ್ತಾರೆ. ‘ನಾನು ಈ ಚಿತ್ರದಲ್ಲಿ ಬರೀ ನಟನೆ ಮಾಡಿದ್ದೀನಿ. ಆದರೆ, ಸುದೀಪ್ ಈ ಚಿತ್ರದ ನಿಜವಾದ ಬ್ಯಾಕ್ ಬೋನ್. ಇಲ್ಲಿ ನನಗಿಂಥ ಅವನ ಪಾಲು ಜಾಸ್ತಿ ಇದೆ. ತೆರೆಯ ಮೇಲೆ ಅವನು ಕಾಣಿಸಿಕೊಳ್ಳುವುದು ಅರ್ಧ ಗಂಟೆಯಾದರೂ, ತೆರೆಯ ಹಿಂದೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾನೆ. ಬಿಡುವಿಲ್ಲದಂತೆ ಓಡಾಡಿದರೂ ಚಿತ್ರದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾನೆ. ಸಿನಿಮಾ ಬಿಟ್ಟರೆ ಅವನ ಹತ್ತಿರ ಬೇರೆ ವಿಷಯ ಮಾತಾಡೋದು ಕಷ್ಟ. ಅಂತ ಹಾರ್ಡ್ ವರ್ಕರ್ ಅವನು. ಮೊದಲು ಈ ಚಿತ್ರವನ್ನ ನಾನು ಮಾಡೋದಿಲ್ಲ ಅಂತ ಹೇಳಿದ್ದೆ. ಮೂಲ ಚಿತ್ರ ನೋಡಿ ಖುಷಿ ಆಯ್ತು. ಅಷ್ಟರಲ್ಲಿ ಈ ಸಿನಿಮಾ ನಿರ್ಮಿಸಬೇಕಿದ್ದವರು ಬದಲಾಗಿ, ಕೊನೆಗೆ ಸುದೀಪ್ ಈ ಚಿತ್ರವನ್ನು ನಿರ್ಮಿಸೋಕೆ ಮುಂದೆ ಬಂದ. ಬಹಳ ಖುಷಿಯಿಂದ ಈ ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡೆ’ ಎನ್ನುತ್ತಾರೆ ಅಂಬರೀಶ್.
ಇನ್ನು ನಿರ್ದೇಶಕ ಗುರುದತ್ ಗಾಣಿಗ ಅವರ ಬಗ್ಗೆ ಮಾತನಾಡುವ ಅಂಬರೀಶ್, ಮೊದಲು ಗುರುದತ್ ಅವರನ್ನು ನೋಡಿದಾಗ ನಕ್ಕಿದ್ದರಂತೆ. ‘ಆ ಹುಡುಗ ಏನು ಮಾಡಬಹುದು ಎಂಬ ಕುತೂಹಲವಿತ್ತು. ಆದರೆ, ಕೆಲವು ಮಹತ್ವದ ದೃಶ್ಯಗಳನ್ನ ಬಹಳ ಚೆನ್ನಾಗಿ ಚಿತ್ರೀಕರಣ ಮಾಡಿದ್ದಾನೆ. ಯಾರದೋ ದೇಹ, ಗಾತ್ರ ನೋಡಿ ಅವರನ್ನು ಅಳಿಯಬಾರದು. ಅದಕ್ಕೆ ಒಳ್ಳೆಯ ಉದಾಹರಣೆ ನಾನೇ. 500 ರೂಪಾಯಿಗೆ ವಿಲನ್ ಪಾತ್ರ ಮಾಡೋಕೆ ಬಂದ ನಾನು, ನಂತರದ ವರ್ಷಗಳಲ್ಲಿ ಪೋಷಕ ಪಾತ್ರ ಮಾಡಿ, ನಾಯಕನಾಗಿ, ಜನನಾಯಕನಾಗಲಿಲ್ಲವಾ? ಅದೇ ತರಹ ಈ ಚಿತ್ರದ ಪಾತ್ರವೂ ಇದೆ. ತಲೆಗೂದಲು ಬೆಳ್ಳಗಾದ ಮಾತ್ರಕ್ಕೆ ಅವನಿಗೆ ವಯಸ್ಸಾಯ್ತು ಅಂತ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ಸಿನಿಮಾ ನೋಡಿ, ನನಗೆ ನಿಜಕ್ಕೂ ವಯಸ್ಸಾಯ್ತಾ? ಅಂತ ನೀವೇ ಹೇಳಿ’ ಎನ್ನುತ್ತಾರೆ ಅಂಬರೀಶ್.