Advertisement

ಅಭಿಮಾನಿಗಳ ಸಮ್ಮುಖದಲ್ಲಿ ಅಂಬಿ ಜನುಮ ದಿನ

09:13 AM May 31, 2019 | Team Udayavani |

ಕಂಠೀರವ ಸ್ಟುಡಿಯೋದಲ್ಲಿಂದು ಎಂದಿಗಿಂತಲೂ ಜನಜಂಗುಳಿ. ಅದಕ್ಕೆ ಕಾರಣ, ಅಂಬರೀಶ್‌ ಅವರ ಹುಟ್ಟುಹಬ್ಬ. ರಾಜ್ಯದ ನಾನಾ ಭಾಗದಿಂದ ಆಗಮಿಸಿದ್ದ ಅಭಿಮಾನಿಗಳು ಅಂಬರೀಶ್‌ ಸ್ಮಾರಕ ಎದುರು ಸಾಲುಗಟ್ಟಿ ನಿಂತು, ತಮ್ಮ ಪ್ರೀತಿಯ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ಮೂಲಕ, ಜೈಕಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿವಿಧ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ಸ್ಮಾರಕ ಬಳಿ ಬೆಳಗ್ಗೆ ಆಗಮಿಸಿದ ಅಂಬರೀಶ್‌ ಅವರ ಪತ್ನಿ ಸುಮಲತಾ ಅಂಬರೀಶ್‌ ಹಾಗು ಪುತ್ರ ಅಭಿಷೇಕ್‌ ಅವರು ಅಂಬರೀಶ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಡಲೆಪುರಿ ಮಾಲಾರ್ಪಣೆ ಮಾಡಿ, ಕೆಲ ಸಮಯ ಕೈ ಮುಗಿದು ನಿಂತುಕೊಂಡಿದ್ದು ವಿಶೇಷವಾಗಿತ್ತು. ಸುತ್ತಲೂ ನೆರೆದಿದ್ದ ಅಂಬರೀಶ್‌ ಅವರ ಅಭಿಮಾನಿಗಳು ಅಂಬರೀಶ್‌ ಅವರ ಗುಣಗಾನ ಮಾಡುವ ಮೂಲಕ ಜಯಘೋಷ ಮೊಳಗಿಸುತ್ತಿದ್ದರು.

Advertisement

ಅತ್ತ, ಬಹುತೇಕ ಅಭಿಮಾನಿಗಳು ರಕ್ತದಾನ ಮಾಡಿದರು, ನೇತ್ರದಾನಕ್ಕೂ ಸಹಿ ಹಾಕಿ ಅಭಿಮಾನ ಮೆರೆದರು. ಬಹುತೇಕರು ಅಂಬರೀಶ್‌ ಅವರ ಭಾವಚಿತ್ರ ಹಿಡಿದು, ಎಲ್ಲರಿಗೂ ಭಾವಚಿತ್ರದ ಜೊತೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು. ಮೋದಿನಗರದ ಲಯನ್ಸ್‌ ಕ್ಲಬ್‌ ನೇತ್ರದಾನ ಶಿಬಿರ ಹಾಗು ಉಚಿತ ಆರೋಗ್ಯ ಶಿಬಿರ ಆಯೋಜಿಸಿತ್ತು. “ದೇವರ ಮಗ ಅಭಿಷೇಕ್‌ ಅಂಬಿ ಬಳಗ’ದ ವತಿಯಿಂದ ಸ್ಮಾರಕ್ಕೆ ಪೂಜೆ ಸಲ್ಲಿಸಿ, ಆಗಮಿಸಿದ್ದ ಅಂಬರೀಶ್‌ ಅಭಿಮಾನಿಗಳಿಗೆ ಹಾಗು ಸಾರ್ವಜನಿಕರಿಗೆ “ಕಬ್ಬಿನ ಹಾಲು’ ವಿತರಿಸುವ ಮೂಲಕ ವಿಶೇಷ ಪ್ರೀತಿ ತೋರಿದರು.

ಅಂಬರೀಶ್‌ ಅಭಿಮಾನಿ ಸಂಘದ ಅನೇಕರು ಅಂಬರೀಶ್‌ ಭಾವಚಿತ್ರದ ಜೊತೆಗಿದ್ದ ಅಂಬಿ ಜನ್ಮೋತ್ಸವ ಹೆಸರಿನ ಟೀ ಶರ್ಟ್‌ ಧರಿಸಿ ಗಮನಸೆಳೆದರು. ಇದೇ ವೇಳೆ ಉಚಿತ ಆರೋಗ್ಯ ಶಿಬಿರಕ್ಕೆ ಸುಮಲತಾ ಅಂಬರೀಶ್‌ ಚಾಲನೆ ನೀಡಿದರು. ರಕ್ತದಾನ ಶಿಬಿರಕ್ಕೂ ಭೇಟಿ ನೀಡಿ, ಅಭಿಮಾನಿಗಳ ಪ್ರೀತಿಯನ್ನು ಕೊಂಡಾಡಿದರು. ರಕ್ತದಾನ ಮಾಡಿದ ಅಭಿಮಾನಿಗಳಿಗೆ ಪ್ರಶಂಸಾ ಪತ್ರ ವಿತರಿಸುವ ಮೂಲಕ ಗೌರವಿಸಿದರು.

ನಂತರ ಅಂಬರೀಶ್‌ ಸ್ಮಾರಕ ಸುತ್ತಲೂ ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸಿ, ನಮಸ್ಕರಿಸಿ, ನಿಮ್ಮೆಲ್ಲರ ಅಭಿಮಾನ, ಪ್ರೀತಿ ಹೀಗೆ ಇರಲಿ ಎನುತ್ತಲೇ, ಎಲ್ಲರಿಗೂ ಸಿಹಿ ವಿತರಿಸಿದರು. ಅಂಬರೀಶ್‌ ಇಲ್ಲದ ಮೊದಲ ಹುಟ್ಟುಹಬ್ಬ ಇದಾಗಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಸಂದೇಶ್‌ ನಾಗರಾಜ್‌ ಸೇರಿದಂತೆ ಹಲವರು ಹಾಜರಿದ್ದರು.

ಅಂಬರೀಶ್‌ ನಮ್‌ ಜೊತೆಯಲ್ಲೇ ಇದ್ದಾರೆ
“ಅಂಬರೀಶ್‌ ಎಲ್ಲೂ ಹೋಗಿಲ್ಲ. ಅವರು ನಮ್‌ ಜೊತೆಯಲ್ಲೇ ಇದ್ದಾರೆ. ನಮ್ಮ ಹಿಂದೆಯೇ ಇದ್ದು, ಎಲ್ಲವನ್ನೂ ನಡೆಸುತ್ತಿದ್ದಾರೆ ಎಂಬ ನಂಬಿಕೆ ನನಗಿದೆ. ಮಂಡ್ಯ ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು, ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಂಡು ಹೋಗುತ್ತೇನೆ. ಅಂಬರೀಶ್‌ ಅವರ ಹೆಸರಿಗೆ ಯಾವತ್ತಿಗೂ ಕಳಂಕ ಬರದಂತೆಯೇ ನಡೆದುಕೊಳ್ಳುತ್ತೇನೆ ಎಂದು ನಾನು ಮಂಡ್ಯದ ಜನತೆಗೆ ಮಾತು ಕೊಡುತ್ತೇನೆ.

Advertisement

ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇದರಿಂದ ರೈತರ ಸಮಸ್ಯೆಗೆ ಪರಿಹಾರ ಸಿಗಲ್ಲ. ಮಂಡ್ಯ ಜಿಲ್ಲೆಯಲ್ಲಿ ಎಂಟು ಜನ ಶಾಸಕರಿದ್ದಾರೆ. ಅವರಿಗೂ ಆ ಕ್ಷೇತ್ರದ ಜನರು ಮತ ಹಾಕಿದ್ದಾರೆ. ಇದು ಎಲ್ಲರ ಜವಾಬ್ದಾರಿ.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸೇರಿ, ಈ ಕಾವೇರಿ ವಿಚಾರವನ್ನು ಸರಿಪಡಿಸಬೇಕು. ಈಗಾಗಲೇ ನಾನು ಒಂದಷ್ಟು ಯೋಜನೆಗಳ ಕುರಿತು ಯೋಚಿಸಿದ್ದೇನೆ. ಅದಕ್ಕೆ ಸಂಬಂಧಿಸಿದ ನಾಲ್ವರು ತಜ್ಞರ ಜೊತೆ ಚರ್ಚಿಸಿದ್ದೇನೆ. ನಾನಿನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಚುನಾವಣೆಯಲ್ಲಿ ಸೋತ ವಿಷಯ ಇಟ್ಟುಕೊಂಡು, ಕಾವೇರಿ ವಿಚಾರದಲ್ಲಿ ವಿನಾಕಾರಣ ಗೊಂದಲ ಎಬ್ಬಿಸುವುದು ಸರಿಯಲ್ಲ. ನನಗೆ ಜನರು ಮುಖ್ಯ. ಅವರಿಗಾಗಿ ಈಗಾಗಲೇ ಕೆಲಸ ಮಾಡಲು ಶುರುಮಾಡಿದ್ದೇನೆ’
– ಸುಮಲತಾ ಅಂಬರೀಶ್‌, ಸಂಸದೆ

ದಚ್ಚು-ಕಿಚ್ಚ ಟ್ವೀಟ್‌
ಅಂಬರೀಶ್‌ ಇಲ್ಲದ ಮೊದಲ ಹುಟ್ಟುಹಬ್ಬವನ್ನು ಅಭಿಮಾನಿಗಳು ಜೋರಾಗಿಯೇ ಆಚರಿಸಿದ್ದಾರೆ. ಅವರಿಲ್ಲದ ಬರ್ತ್‌ಡೇ ಕುರಿತು ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಸುದೀಪ್‌, ದರ್ಶನ್‌ ಟ್ವೀಟ್‌ ಮೂಲಕ ಅಂಬರೀಶ್‌ ಅವರಿಗೆ ಶುಭಾಶಯ ತಿಳಿಸಿ, ಗುಣಗಾನ ಮಾಡಿದ್ದಾರೆ.

“ನಿಮ್ಮ ಅನುಪಸ್ಥಿತಿ ತುಂಬಾ ಕಾಡುತ್ತಿದೆ ಮಾಮ. ಮೇ.29 ಯಾವಾಗಲೂ ಮೊದಲಿನಂತೆ ಇರಲ್ಲ’ ಎಂದು ಸುದೀಪ್‌ ಭಾವುಕರಾಗಿ ಟ್ವೀಟ್‌ ಮಾಡಿದರೆ, ಅತ್ತ ದರ್ಶನ್‌ ಅವರು ಸಹ ಕಾರಿನಲ್ಲಿ ಅಂಬರೀಶ್‌ ಜೊತೆ ಕುಳಿತಿರುವ ಫೋಟೋ ಹಾಕಿ ಟ್ವೀಟ್‌ ಮಾಡಿದ್ದಾರೆ. “ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ಅವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ, ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ ಆದರ್ಶಗಳು ಸದಾ ಅವರ ಕುಟುಂಬ ಅಭಿಮಾನಿಗಳನ್ನು ಕಾಯುತ್ತಿರುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next