ಮಡಿಕೇರಿ: ಸುಭದ್ರ ಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳು, ದೂರದೃಷ್ಟಿ, ಮಾರ್ಗದರ್ಶನಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಂ.ಕೆ. ವಿಜು ಸುಬ್ರಮಣಿ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿ ಧಾನ ಶಿಲ್ಪಿ, ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ಅವರ 126ನೇ ವರ್ಷಾಚರಣೆ ಪ್ರಯುಕ್ತ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ತಮಗಿದೋ ನಮ್ಮ ಗೌರವ ನಮನ ಮೂರು ನುಡಿ-ನೂರು ದುಡಿ ನುಡಿ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರು ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಧೀಮಂತ ನಾಯಕ. ಇವರ ಚಿಂತನೆಗಳು, ಸಮಾಜಕ್ಕೆ ನೀಡಿರುವ ಕೊಡುಗೆ ಸದಾ ಸ್ಮರಿಸುವಂತಾಗಬೇಕು ಎಂದು ವಿಜು ಸುಬ್ರಮಣಿ ಕರೆ ನೀಡಿದರು.
ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಸದಾ ಸ್ಮರಿಸುವಂತಾಗಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂಬೇಡ್ಕರ್ ಅವರ ಜೀವನ, ಬದುಕು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ವಿಶ್ವದಲ್ಲಿಯೇ ಅತ್ಯಂತ ಪ್ರಬಲ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಪ್ರಪಂಚದಲ್ಲಿ ಪ್ರಸಿದ್ಧ ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ಅವರ ಶ್ರಮ ದೊಡ್ಡದು ಎಂದರು.
ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ಅವರು ಮಾತನಾಡಿ ಡಾ| ಬಿ.ಆರ್. ಅಂಬೇಡ್ಕರ್ ಅವರು ಸಮಾಜದ ಬಡ ವರ್ಗದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸದಾ ತುಡಿತ ಹೊಂದಿದ್ದರು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿ ರುವ ಕೊಡುಗೆಯನ್ನು ಸದಾ ಸ್ಮರಿಸಬೇಕು. ಇವರ ಕಾರ್ಯ ದಕ್ಷತೆ, ಹೋರಾಟದ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಶ್ರೀಧರ ಹೆಗಡೆ ಮಾತನಾಡಿದರು. ನಗರಸಭೆ ಪೌರಾಯುಕ್ತೆ ಬಿ. ಶುಭಾ, ಪ್ರಮುಖರಾದ ಮುತ್ತಪ್ಪ, ಗಣೇಶ್, ದಿವಾಕರ್, ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಇತರರು ಹಾಜರಿದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ ಸ್ವಾಗತಿಸಿದರು. ರಾಜು ಮತ್ತು ತಂಡದವರು ನುಡಿ ನಮನ ಹಾಡು ಹಾಡಿದರು. ಚರ್ಮವಾದ್ಯ, ಹೋರಾಟದ ಹಾಡುಗಳು, ಜನಪದ ಕಲಾ ಕಾರ್ಯಕ್ರಮ ಆಕರ್ಷಣೀಯವಾಗಿತ್ತು.